Wednesday, February 01, 2012

ನೆನಪುಗಳು ಸಾಯುವುದಿಲ್ಲ


ನೆನಪುಗಳು ಸಾಯುವುದಿಲ್ಲ
ಏಕೆಂದರೆ ಅವಕ್ಕೆ ಜೀವವಿಲ್ಲ

ನೆನಪುಗಳು ಬಲೂನಿನಂತೆ
ಭಾವನೆಗಳು ತುಂಬಿದ್ದಾಗ
ಹಿಗ್ಗಿ ಅರಳುತ್ತವೆ. ಆಗಲೇ
ಒಂದು ಆಕಾರ, ರೂಪ ಎಲ್ಲ!

ನೆನಪುಗಳು ಹಳೆಯ ಕಾಲದ ಚಿತ್ರ
ಈಗ ಅವು ಬರೀ ದೂರದ ಚುಕ್ಕೆ
ಚುಕ್ಕೆಗಳೇ ಚಿತ್ರವಾಗುವುದಿಲ್ಲ
ನಾವು ಜೋಡಿಸಿ ಬರೆಯಬೇಕಷ್ಟೆ

ನೆನಪುಗಳು ತುಂಬಾ ಗಟ್ಟಿ
ಅವು ಕ್ಷಣಕ್ಕೊಮ್ಮೆ ಬದಲಾಗುವುದಿಲ್ಲ
ನೆನಪಿನಲ್ಲಿ ನಿಶ್ಚಿತತೆಯಿದೆ,
ಕಹಿಯೊ ಸಿಹಿಯೋ, ಸ್ಪಷ್ಟತೆಯಿದೆ

ಜೀವನದಲ್ಲಿ ನೆನಪುಗಳು
ಈರುಳ್ಳಿಯ ಸಿಪ್ಪೆಯಿದ್ದಂತೆ
ಸಿಪ್ಪೆ ತೆಗೆದರೆ ಈರುಳ್ಳಿಯಿಲ್ಲ
ನೆನಪಿಲ್ಲದೆ ಜೀವನವಿಲ್ಲ

ನೆನಪುಗಳು ಬಾಳೆಯಂತೆ
ಉಣಿಸಬಹುದದರಲಿ ಭಾವಬುತ್ತಿಯ
ಆದರೆ ಅದನ್ನೇ ತಿನ್ನಲಾಗುವುದಿಲ್ಲ
ಬಾಳೆಯಂತೆಯೇ, ಇವಕ್ಕೂ ಒಂದೇ ಕೊನೆ!

ನೆನಪುಗಳು ಸಾಯುವುದಿಲ್ಲ
ಏಕೆಂದರೆ ಅವಕ್ಕೆ ಜೀವವಿಲ್ಲ

ವಿ.ಸೂ: ನೆನಪುಗಳ ಬಗ್ಗೆ ಬೇರೆ ಬೇರೆ ಸಮಯದಲ್ಲಿ ಗೀಚಿದ್ದ ಸಾಲುಗಳನ್ನು ಒಟ್ಟಿಗೆ ಬರೆದಿದ್ದೇನೆ, ಅಷ್ಟೆ. ಒಂದೇ ಕವಿತೆ ಎಂದುಕೊಂಡು ಓದಿದರೆ ಸಮಂಜಸವೆನಿಸಲಾರದು! ಸಾದ್ಯವಿದ್ದಷ್ಟು ಬೇರೆ ಬೇರೆಯಾಗಿಯೇ ಓದಿಕೊಳ್ಳಿ.. :)

Tuesday, August 23, 2011

ವಿಜಯ ಕರ್ನಾಟಕದ ರೋಗ ಈಗ ಕನ್ನಡಪ್ರಭಕ್ಕೆ!

ಮಿತಿಮೀರಿದ ತಪ್ಪುಗಳು, ಅಸಂಖ್ಯ ಎಡವಟ್ಟುಗಳು, ತಪ್ಪನ್ನು ಒಪ್ಪಿಕೊಳ್ಳುವ ಕನಿಷ್ಟ ಸೌಜನ್ಯವೂ ಇರದ ಸೊಂಪಾದ’ಕರು’! ಇತ್ಯಾದಿಗಳಿಂದ ಬೇಸತ್ತು ವಿಜಯ ಕರ್ನಾಟಕ ಓದುವುದನ್ನು ನಿಲ್ಲಿಸಿದ್ದೆ. 

ಅದಾದ ಮೇಲೆ ಕನ್ನಡಪ್ರಭ ಚೆನ್ನಾಗಿದೆ ಅಂತ ಅದನ್ನು ತರಿಸುತ್ತಿದ್ದೆ. ಇತ್ತೀಚೆಗೆ ಅದರಲ್ಲೂ ವಿ.ಕ ರೋಗ ಕಾಣಿಸಿಕೊಂಡಿದೆ. ಹೆಚ್ಚೇನು ಬರೆಯುವ ಅಗತ್ಯವಿಲ್ಲ. ಇಲ್ಲಿ ಒಂದೆರಡು ಸ್ಯಾಂಪಲ್ ಇದೆ ನೋಡಿ.

೧.
ಎಚ್’ಎಸ್’ಆರ್ ಲೇಔಟ್ ೭ನೇ ಸೆಕ್ಟರ್ ೧೯ನೇ ಕ್ರಾಸ್’ನ ಮನೆಯೊಂದರಲ್ಲಿ ದಾಳಿ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೋಲೀಸರು ... ನಡೆಸಿ.. !
ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದು ಪೋಲೀಸರು ದಾಳಿ ನಡೆಸಿದರೋ ಅಥವಾ ಅವರೇ ನಡೆಸುತ್ತಿದ್ದ ದಾಳಿಯ ಬಗ್ಗೆ ಅವರಿಗೇ ಮಾಹಿತಿ ಸಿಕ್ಕಿ ಇನ್ನೇನನ್ನೋ ನಡೆಸಿದರೊ! ಒಟ್ಟಿನಲ್ಲಿ ಇವರದ್ದೊಂದು ಬೇಜವಾಬ್ದಾರಿ ವರದಿ.

೨.

’ಅಣ್ಣಾ ತಂಡ’, ’ಅಣ್ಣಾ ಟೀಮ್’, ’ಅಣ್ಣ ಟೀಮ್’, ’ಅಣ್ಣಾ ಟೀಂ’. ಒಂದೇ ಲೇಖನದಲ್ಲಿ ನಾಲ್ಕೈದು ಹೆಸರುಗಳು! ಮತ್ತೊಂದು ಕೊರಲಿದೆ.

ಈ ಅವಾಂತರಗಳೆಲ್ಲ ಹಳೆಯ ಕೆಲವು ಬರಹಗಳನ್ನು ನೆನಪಿಸುತ್ತಿವೆ.

ಚಿತ್ರಗಳು http://www.kannadaprabha.com/