Saturday, September 16, 2006

ಗರ್ಮಿ

ನಾನು ಬೆಂಗಳೂರಿಗೆ ಬಂದಮೇಲೆ "ಗರ್ಮಿ" ಶಬ್ಧವನ್ನು ಕೇಳಿದ್ದು ಅತಿ ವಿರಳ.
ಕೇಳೆ ಇಲ್ಲ ಎಂದರೂ ಸರಿಯೆ.

ನಮ್ಮೂರ ಕಡೆಗೆಲ್ಲ ಈ ಶಬ್ಧ (ಈಗಲೂ) ಬಹಳ ಬಳಕೆಯಲ್ಲಿದೆ.
ವರುಷಗಳ ನಂತರ ಇಂದು ಈ ಸಂಜೆ ಈ ಶಬ್ಧವನ್ನು ಮತ್ತೆ ನಾ ಕೇಳಿದೆ.
ಅದೂ ನನ್ನ ಬಾಯಿಯಿಂದಲೇ!

ಸನ್ನಿವೇಶ:
ಇಂದು ಸಂಜೆ ರಂಗನಾಥಜ್ಜ(ವಿದ್ವಾನ್ ಎನ್ ರಂಗನಾಥ ಶರ್ಮರ) ಮನೆಗೆ
ಹೋಗಿದ್ದೆ. ಹೀಗೆ ಲೋಕಾಭಿರಾಮ ಮಾತನಾಡುತ್ತಿದ್ದೆವು. ನಾನು ನಾಳೆನ
'ಚಕ್ಲಿ ಕಂಬ್ಳ'ದ ಬಗ್ಗೆ ಹೇಳತೊಡಗಿದೆ.

"ಕಾಪಿ ಕುಡುದ್ರೆ ಗರ್ಮಿ ಆಗ್ತು, ಚಾ ಕುಡುದ್ರೆ ಪಿತ್ತ. ಹಂಗಾಗಿ ಎಲ್ಲರಿಗು ಕಷಾಯನೆ
ಮಾಡ್ಶಬುಡ್ತ್ಯ".

ಆ ಕ್ಷಣದಿಂದಲೇ ಮಾತು (ಸಹಜವಾಗಿ) ಗರ್ಮಿ ಶಬ್ಧದ ಕಡೆಗೆ ತಿರುಗಿತು.
ಆಗ ಅಜ್ಜ ಆ ಶಬ್ಧಕ್ಕೆ ಅವರು ವ್ಯಾಖ್ಯೆ ಹೇಳಬೇಕಾಗಿ ಬಂದಿದ್ದ ಸಂದರ್ಭವೊಂದನ್ನು
ಜ್ಞಾಪಿಸಿಕೊಂಡರು.
ಅದನ್ನು ಅವರ ಮಾತಲ್ಲೇ ಹೇಳುವುದಾದರೆ,
" ಸೊರಬದಲ್ಲಿ ಪಂಗಾಲ್ ಡಾಕ್ಟ್ರು ಅಂತ ಒಬ್ರು ಇದ್ರು. ನಾನು ಯಾಕೋ ಅವರ
ಬಳಿ ಹೋಗಿದ್ದಾಗ ರೋಗಿಯೊಬ್ಬ ಇದ್ದ ಅಲ್ಲಿ. ಆ ರೋಗಿ ಹೇಳ್ತಾಯಿದ್ದ, ಅವನಿಗೆ
ಗರ್ಮಿಯಾಗಿಹೋಗಿದೆ ಎಂದು. ಪಂಗಾಲ್ ಡಾಕ್ಟ್ರಿಗೆ ಅದು ಅರ್ಥವಾಗ್ತಾ ಇರ್ಲಿಲ್ಲ.
ಆಗ ನಾನು ಗರ್ಮಿ ಪದಕ್ಕೆ ವ್ಯಾಖ್ಯೆ ಕೊಡಬೇಕಾಯ್ತು. ನಾನು ಹೇಳಿದೆ:
'ಹಾಲು ಮೊಸರು ಮಜ್ಜಿಗೆ ಇತ್ಯಾದಿಗಳನ್ನು ಬಳಸದೇ ಬರೇ ಹುಳಿ ಖಾರಗಳನ್ನು
ಹೆಚ್ಚಾಗಿ ತಿಂದಾಗ ದೇಹದಲ್ಲಿ ಒಂದು ತರಹದ ಉರಿ ಉಂಟಾಗುತ್ತದೆ. ಕಣ್ಣಗಳಲ್ಲೂ
ವಿಚಿತ್ರ ಉರಿ ಕಾಣಿಸಿಕೊಳ್ಳುವುದೂ ಇದೆ. ಇದನ್ನೇ ನ
ಮ್ಮ ಕಡೆ ಗರ್ಮಿ ಎನ್ನುತ್ತೇವೆ'".

ಇಷ್ಟು ಹೇಳಿದವರೇ ಅವರು ಒಂದು ಕ್ಷಣ ಮಾತು ನಿಲ್ಲಿಸಿದರು. ನಾನು ಕುತೂಹಲದಿಂದ
ಕೇಳಿದೆ.

"ಗರ್ಮಿ ಎಂಬ ಶಬ್ಧ ಕನ್ನಡ ಶಬ್ಧಕೋಶದಲ್ಲಿ ಇದೆಯೇ?" ಎಂದು.
ನನಗೆ ದೊರೆತ ಉತ್ತರವೇನಂದರೆ, ಗರ್ಮ(ಅಥವಾ ಅದು ಘರ್ಮವೇ?) ಎಂಬ
ಒಂದು ಶಬ್ಧವಿದೆ. ಅದರರ್ಥ 'ಉಷ್ಣ' ಶಬ್ಧದ ಅರ್ಥವನ್ನು ಹೋಲುತ್ತದೆ. ಗರ್ಮಿಯು
ಇದೇ ಶಬ್ಧದ ಗ್ರಾಮ್ಯರೂಪವಾಗಿರಬಹುದು.

ಅಲ್ಲಿಂದ ಮಾತು ಬೇರೆಡೆ ತಿರುಗಿ ಗರ್ಮಿಯನ್ನು ನಾನು ಅಲ್ಲೇ ಮರೆತೆ. ಮನೆಗೆ
ಬಂದು ಗರ್ಮ/ಘರ್ಮ ಕ್ಕಾಗಿ ಹುಡುಕಲು ಪ್ರಾರಂಭಿಸಿದೆ. ಸುಮಾರು ೩೦ ನಿಮಿಷ
ಗುದ್ದಾಡಿದರೂ ಏನೂ ಸಿಗಲಿಲ್ಲ.

ಆಮೇಲೆ ಕನ್ನಡ ಕಸ್ತೂರಿ ಎಂಬ ಅಂತರ್ಜಾಲ ತಾಣವೊಂದರಲ್ಲಿ 'ಗರಮ್'
ಎಂಬೊಂದು ಶಬ್ಧ ಸಿಕ್ಕಿತು.


ಇದೂ ಕೂಡ ಶಾಖ ಎಂಬ ಅರ್ಥವನ್ನೇ ಕೊಡುವ ಶಬ್ಧ.
ಶರ್ಮರು ಹೇಳಿದ 'ಗರ್ಮ' ಈಗ ಗರಮ್ ಆಗಿದೆಯೇ? ಗೊತ್ತಿಲ್ಲ.

ಮತ್ತೊಮ್ಮೆ ಸಮಯ ಸಿಕ್ಕಾಗ ಹೀಗೆ ಅಳಿಯುತ್ತಿರುವ ಶಬ್ಧಗಳನ್ನು ಕೆದಕಿ
ಹುಡುಕಿ ತೆಗೆಯುವ ಪ್ರಯತ್ನ ಮಾಡಬೇಕೆಂದಿದ್ದೇನೆ.

2 comments:

ಸುಶ್ರುತ ದೊಡ್ಡೇರಿ said...

ನಿನ್ನೆ ಈ article ಓದಿದಿ. 'ಅರೆ! ಹೌದಲ್ಲ' ಅನ್ನುಸ್ಚು. So, ಮನೆಗೆ ಹೋಗಿ dictionary ತೆರೆದು ನೋಡಿದಿ. ಅದರಲ್ಲಿ ಗರ್ಮಿ ಅನ್ನೋ ಶಬ್ದಕ್ಕೆ ಅರ್ಥ ಇಲ್ಲೆ. ಆದರೆ 'ಘರ್ಮ' ಅನ್ನೋ ಶಬ್ದಕ್ಕೆ 'ಉಷ್ಣ' ಅನ್ನೋ ಅರ್ಥ ಇದ್ದು. ಬಹುಶಃ ಇದೇ ಶಬ್ದ ಆಡುಭಾಷೆಯಲ್ಲಿ 'ಘರ್ಮಿ' / 'ಗರ್ಮಿ' ಆಗಿರವು ಅಂತ ನಂಗನ್ನುಸ್ತು....

Alpazna said...

@sushrutha
ಓಹೊ! ನಂಗೆ ಘರ್ಮಿನು ಸಿಕ್ಕಿರ್ಲೆ!

ಇರ್ಲಿ ಬಿಡು. ಇನ್ನು ಎಷ್ಟೊ ಶಬ್ಧ ಇದ್ದು
ಅಲ್ದ ಈ ನಮ್ನಿದು?

ಏನಾರು ಮಾಡಿ ಅದನ್ನೆಲ್ಲ ಕನ್ನಡ ಶಬ್ಧಕೋಶಕ್ಕೆ
ಸೇರ್ಸವು.