
ಎರಡೆರಡು ಇ-ಪತ್ರದ ಆಹ್ವಾನದ ಜೊತೆಗೆ ಫೋನು ಬೇರೆ ಮಾಡಿ ಕರೆದಿದ್ದಾರೆ. ಹಾಗೇ ತಿನ್ನುವವನಿಗೆ ಸಿಪ್ಪೆ ಸುಲಿದುಕೊಟ್ಟಂತೆ, ದಾವಣಗೆರೆಗೆ ಹೋಗಲು ಸದಾ ಏನಾದರೊಂದು ನೆವ ಹುಡುಕುತ್ತಿರುವ ನನ್ನಂಥ ನನಗೆ ಈ ಆಹ್ವಾನ!
ಬೇರೆ ಎಲ್ಲಾ ಕೆಸಲಗಳನ್ನು ಬದಿಗೆ ಗಟ್ಟಿ ಒತ್ತಿ, ನಾಡಿದ್ದು ಶುಕ್ರವಾರ ರಾತ್ರಿ ದಾವಣಗೆರೆಗೆ ಹೊರಟು ನಿಂತಿದ್ದೇನೆ, ತುದಿಕಾಲಿನಲ್ಲಿ ಎಂದು ಮತ್ತೆ ಹೇಳುವುದು ಬೇಕಿಲ್ಲ.
ಮೊನ್ನೆ ಊರಿನಿಂದ ಬರುವಾಗ ದಾವಣಗೆರೆಯಲ್ಲಿ ಬೆಣ್ಣೆದೋಸೆ ತಿಂದು ಬಂದಿದ್ದು ಹೌದಾದರೂ, ಅಂದು ಬೇರೆ ಯಾವುದಕ್ಕೂ ಪುರುಸೊತ್ತಿರಲಿಲ್ಲ. ಹೊತ್ತು ಮುಳುಗುವುದರೊಳಗೆ ಬೆಂಗಳೂರು ಸೇರಬೇಕಿತ್ತು. ಆದರೆ ಈ ವಾರಾಂತ್ಯ ಹಾಗೇನಾಗುವುದಿಲ್ಲ. ಎರಡು ಪೂರ್ತಿ ದಿನಗಳನ್ನು ದಾವಣಗೆರೆಯಲ್ಲಿ ಕಳೆಯಬಹುದು.
ಎಷ್ಟೊಂದು ಕೆಲಸಗಳಿವೆ ಮಾಡಲಿಕ್ಕೆ. ಅಪರೂಪಕ್ಕೊಮ್ಮೆ ಹೋದರೆ ದಿನವಿಡೀ ತಿರುಗುವುದರಲ್ಲೇ ಕಳೆದು ಹೋಗುತ್ತದೆ.
ಕಳೆದಬಾರಿ ಹೋದಾಗ ಬಸವರಾಜಪ್ಪನವರನ್ನು ಕಾಣಲೇ ಆಗಲಿಲ್ಲ. ಈ ಬಾರಿ ತಪ್ಪದೇ ಹೋಗಿಬರಬೇಕು. ಬಹಳ ಸಂತೋಷಪಟ್ಟುಕೊಳ್ಳುವ ಜೀವ.
ವಿದ್ಯಾನಗರದಲ್ಲಿ ಸ್ಟಾಪಿಲ್ಲದ್ದಕ್ಕೆ ಸ್ಲೋ ಮಾಡಿದ ಬಸ್ಸಿನಿಂದ ಹಾರಿಕೊಂಡು, ಬೆನ್ನಿಗೇರಿಸಿದ ಬ್ಯಾಗಿನ ಬೆಲ್ಟನ್ನು ಬಿಗಿಮಾಡಿಕೊಂಡು ಕೃಷ್ಣ ಹಾಸ್ಟೆಲ್ ತನಕ ನಡುರಾತ್ರಿಯಲ್ಲಿ ನಡೆದುಕೊಂಡು ಹೋಗಬೇಕು.
ಮಲಗಿಕೊಂಡ ಮಾಲತೇಶನನ್ನು ಕೂಗಿ ಕೂಗಿ ಕೂಗಿ ಕರೆದು ಎಬ್ಬಿಸಬೇಕು. ಅವನೆದ್ದು ಬಂದು ಗೇಟು ತೆಗೆಯುವವರೆಗೆ ಕಾಯಲಾಗದೆ ಕಂಪೌಂಡ್ ಹತ್ತಿ, ಮಹಡಿಯ ಮೇಲೆ ಜಿಗಿಯಬೇಕು.
ಬೆಳಿಗ್ಗೆ ಎದ್ದು "ವಾಸು" ಬಳಿ ಮಾತನಾಡಿ, ಭಟ್ಟರು ಮಾಡಿದ ತಿಂಡಿಯ ಬಗ್ಗೆ ಗೊಣಗುಡುತ್ತ "ಶ್ರೀನಿಧಿ"ಗೆ ಹೋಗಿ ಅವಲಕ್ಕಿ ತಿಂದು ಅರ್ಧ ಕಾಫಿ ಕುಡಿಯಬೇಕು.
ಬೇಗ ಒಂದು ತಣ್ಣೀರ್ ಸ್ನಾನ ಮುಗಿಸಿ, ಕ್ಲಾಸಿಗೆ ಹೋಗುವ ಜೂನಿಯರ್ ಹುಡುಗರ ಜೊತೆ ವಾಟರ್ ಟ್ಯಾಂಕ್ ನ ವರೆಗೆ ನಡೆದು ಅಲ್ಲಿ ಮರದ ಕೆಳಗೆ ನಿಂತು ಬಸ್ಸಿಗೆ ಕಾಯಬೇಕು.
ಪಕ್ಕದವನ ಕೈಯಿಂದ ಒಂದು ನೋಟ್'ಬುಕ್ ಕಸಿದುಕೊಂಡು, ಅರ್ಧ ದುಡ್ಡುಕೊಟ್ಟು ವಿನಾಯಕ ಬಸ್ಸಿನಲ್ಲಿ ನೇತಾಡಿಕೊಂಡು ಕಾಲೇಜಿಗೆ ಹೋಗಬೇಕು.
ಆಲ್ಪಾಕ್ಕೆ ಹೋಗಿ ಮುಖವೂ ಕಾಣದಷ್ಟು ಹೊಗೆಯೊಳಗೆ ಕುಳಿತು ಉದ್ದ ಗ್ಲಾಸಿನಲ್ಲಿ ಚಹಾಕುಡಿಯಬೇಕು.
ಅರುಣನ ಜೊತೆ ಭಾರತಿ ಹೋಟೆಲ್'ನಲ್ಲಿ ಸಿಗರೇಟ್ ಕೊಂಡು ಕಾಲುದಾರಿಯಲ್ಲಿ ಹೆದ್ದಾರಿಯವರೆಗೂ ಹಸಿರುಗದ್ದೆಯ ನಡುವೆ ನಡೆಯಬೇಕು.
ಮೂಲೆ ಹೋಟೆಲ್ಲಿಗೆ ಹೋಗಿ(ಭಟ್ಟರು ಹೋಟೇಲು ಮುಚ್ಚಿ ಹಾವೇರಿ ಸೇರಿದ್ದಾರೆಂದು ತಿಳಿದಿದ್ದರೂ) ಭಟ್ಟರ ಸುದ್ದಿ ಕೇಳಿಬರಬೇಕು.
ಆಶಿರ್ವಾದಕ್ಕೆ ಹೋಗಿ ಕಾಶಿಯ ಪರಿಚಿತ ಮುಗುಳ್ನಗೆಯ ಸ್ವಾಗತಕ್ಕೆ ಅಷ್ಟೇ ಪರಿಚಿತ ನಗುವಿನ ಪ್ರತಿಕ್ರಿಯೆಕೊಡಬೇಕು. ಬೈಟು ಮೂಸಂಬಿ ಕುಡಿದು ಸಿಗರೇಟನ್ನು ಪಕ್ಕದ ಇಂಟರ್ನೆಟ್ ಸೆಂಟರಿನ ಕೊನೆಯ ಕಂಬಕ್ಕೆ ಹಿಸುಕಿ ನಂಚುತ್ತಲೇ, ಮತ್ತೊಂದು ಕೈಯಲ್ಲಿ ಚಿಲ್ಲೆರೆ ಎಣಿಸಿ ಪ್ಯಾಂಟಿನ ಕಿಸೆಗಿಳಿಸಬೇಕು.
ಝೆರಾಕ್ಸ್ ಅಂಗಡಿಯ ಶಿವುನ್ನ ಮಾತಾಡಿಸಬೇಕು. ಅವನು ಕೇಳುವ ನನ್ನ ಎಲ್ಲಾ ಗೆಳೆಯರ ಸುದ್ದಿಯನ್ನು ಅವನಿಗೆ ಹೇಳಬೇಕು. ಕೆಂಪು ಪ್ಲಾಸ್ಟಿಕ್ ಸ್ಟೂಲಿನ ಮೇಲೆ ಕುಳಿತುಕೊಂಡು, ಬೇಡವೆಂದರೂ ಅವನು ತರಿಸುವ ಚಹಾ ಹೀರುತ್ತಾ ಅವನ ಬ್ಯುಸಿನೆಸ್ ಬಗ್ಗೆ ಕೇಳಬೇಕು.
ಶ್ರೀಪತಿಯ ಕಟ್ಟೆಯಲ್ಲಿ ಕುಳಿತು ಹೇಮಾವತಿಯ ಕಡೆಯಿಂದ ಕಾಲೇಜಿಗೆ ಬರುವ ಹುಡುಗಿಯರ ನೋಡಿ ಕಣ್ಣು ತಂಪುಮಾಡಿಕೊಳ್ಳಬೇಕು.
೧೦ ಗಂಟೆಯ ಬ್ರೇಕ್'ನ ಹೊತ್ತಿಗೆ ಕಾಲೇಜ್ ಕ್ಯಾಂಟೀನಿಗೆ ಹೋಗಿ ನೋಡಿಬರಬೇಕು!
ಪುರುಸೊತ್ತಾದರೆ ಡಿಪಾರ್ಟ್ಮೆಂಟಿಗೆ ಹೋಗಿ ಹೆಚ್ಚೋಡಿ ಅಥವಾ ಯಾರು ಇರುತ್ತಾರೋ ಅವರನ್ನ ಕಂಡು ಮಾತನಾಡಿಕೊಂಡು ಬರಬೇಕು.
ಶಶಿಯ ಜೊತೆ ಡೆಂಟಲ್ ಕಾಲೇಜ್ ಕಡೆ ಸಂಜೆ ಹೊತ್ತೊಂದು ವಾಕ್ ಹೋಗಬೇಕು. ಅವನು Cಯಲ್ಲಿ ಬರೆದ ಹೊಸಗೇಮಿನ ಸುದ್ದಿ ಕೇಳಬೇಕು. ಅವನು ಮಾತು ಮಾತಿಗೆ "ಬಾಬ.. ಹೀಗೂ ಮಾಡ್ಬಹುದಲ್ಲ?" ಎಂದು ಕೇಳಿದಾಗ ಅವನಿಗೆ ನನಗೆ ತಿಳಿದದ್ದನ್ನೆಲ್ಲಾ ವಿವರಿಸಬೇಕು. ಆಮೇಲೆ ಅವನು ಅದ್ಯಾವುದೋ ಹಾಸ್ಟೆಲ್'ಗೆ ಹೋಗಿ ಹುಡುಗಿಯರ ಜೊತೆ ಮಾತನಾಡಿಕೊಂಡು ಬರುವವರೆಗೆ ಲವ್ ಫುಡ್ಡಲ್ಲಿ ಮತ್ತೇನಾದರೂ ಮಾಡಬೇಕು.
ಸ್ಕೂಟರಿಗೆ ೨೦ ರೂಪಾಯಿ ಪೆಟ್ರೋಲು ಹಾಕಿಸಿಕೊಂಡು ಗೋಲ್ಡನ್ ಪಂಜಾಬಿ ಡಾಭಾಕ್ಕೆ ಹೋಗಿ ಊಟ ಮಾಡಬೇಕು.
ರಾತ್ರಿ ರಸವಂತಿ ಬಾಗಿಲು ಹಾಕುವುದರೊಳಗೆ ಅಲ್ಲಿಗೆ ಹೋಗಿ ಅವಲಕ್ಕಿ ತಿಂದು ಜ್ಯೂಸು ಕುಡಿಯಬೇಕು.
BC ಹಾಸ್ಟೆಲ್'ಗೆ ತಾಗಿಕೊಂಡಿರುವ, ಹೆಸರು ನೆನಪಿರದ ಹೋಟೆಲ್'ಗೆ ಹೋಗಿ ಕೋಲ್ಡ್ ಕಾಫಿ ಕುಡಿಯಬೇಕು.
ಸೋಮಾರಿ ಅಮಿತ್'ನನ್ನು ಎಬ್ಬಿಸಿ, ಚರ್ಚ್ ಸ್ಟೀಟಿನಲ್ಲಿ ರಾತ್ರಿ ಎಂಟರ ಹೊತ್ತಿಗೆ ರಾಂ & ಕೋ ಸರ್ಕಲ್ ವರೆಗೂ ನಡೆಯಬೇಕು.
ಶನಿವಾರ ಸಂಜೆ ಆಂಜನೆಯ ದೇವಸ್ಥಾನಕ್ಕೆ ಹೋಗಿ, ಕಾಲ್ಮೇಲೆ ಕಾಲು ಹಾಕಿ ಕಲ್ಲು ಬೆಂಚಿನಮೇಲೆ ಕುಳಿತು ಸಂಜೆಯ ತಂಪನ್ನು ಸವಿಯಬೇಕು.
ಆಹಾರ್ ೨೦೦೦ ಗೆ ಹೋಗೆ "ಅಮೇರಿಕನ್ ತಿಕ್ ಶೇಕ್" ಕುಡಿದು ೫ರೂ ಮಸಾಲೆದೋಸೆ ತಿನ್ನಬೇಕು.
ಇಮ್ಮುವಿನೊಡನೆ ನಡುರಾತ್ರಿಯವರೆಗೂ ಕುಳಿತು ಚರ್ಚಿಸಬೇಕು.
ಹಲ್ಲಿ, ಇಮ್ಮು, ಸೈಂಟಿ, ಸೀಎಮ್ ಎಲ್ಲರನ್ನೂ ಸೇರಿಸಿ ಇಡೀರಾತ್ರಿ ಮೈನರ್'ಮೇಜರ್ ಆಡಬೇಕು.
ಬೆಳೆಯುತ್ತಲೇ ಹೋಗುತ್ತದೆ ಪಟ್ಟಿ.. ಒಂದೊಂದೇ ಎದ್ದು ಕಾಣಿಸಿಕೊಳ್ಳುತ್ತವೆ ನೆನಪುಗಳು; ಕನ್ನಡಿಯ ಮುಂದೆ ನಿಂತು ತಲೆಬಾಚುವಾಗ ಅನಿರೀಕ್ಷಿತವಾಗಿ ಕಾಣಿಸಿಕೊಳ್ಳುವ ಬಿಳಿ ಕೂದಲಿನಂತೆ...


12 comments:
ದಾವಣಗರೆಯ ನೆನಪುಗಳ ಸರಮಾಲೆಯನ್ನೂ, ವಿದ್ಯಾರ್ಥಿ ಜೀವನದ ಗತಕಾಲದ ಇತಿಹಾಸವನ್ನೂ, ವೈಭವವನ್ನೂ ನೆನಪಿಸಿ ನನ್ನನ್ನೂ ಒಮ್ಮೆ ದಾವಣಗೆರೆಯ ಬೀದಿಗಳಲ್ಲಿ ಅಡ್ಡಾಡಿಸಿಬಿಟ್ಟಿದ್ದೀರಿ.ಯಾಕಂದ್ರೆ ನಾನೂ ದಾವಣಗೆರೆಯವನೇ. ನಿಮಗೆ ಧನ್ಯವಾದಗಳು. ನಿಮ್ಮ ಎರಡೂ ಬ್ಲಾಗುಗಳೂ ಚೆನ್ನಾಗಿವೆ. ಬೆಂಗಳೂರಿನಿಂದ ದಾವಣಗೆರೆಗೆ ಹೋಗುವಾಗ ನೀವು ಹಾಕಿಕೊಂಡಿರುವ ಬಹು ಅಂಶದ ಕಾರ್ಯಕ್ರಮಗಳು, ಬಯಕೆಯ ಪಟ್ಟಿ ಸ್ವಾರಸ್ಯಕರವಾಗಿದೆ.
ಗಣೇಶ್.ಕೆ.
http://www.pratispandana.wordpress.com/
v.nice sandeepa.
'aa' life poora nenapisibitte...
golden nenapugalu kadta iddu...
ಬಹುಶಃ 'ಮನದಾಳದ ಮಾತಿ'ನಲ್ಲಿ ಮೂಡಿಬಂದಿರುವ ಯನ್ ಆಲ್ಟುಗೇದರ್ ಡಿಫರೆಂಟ್ ಪೋಸ್ಟು ಇದು. ವೆರಿ ನೈಸ್ ಮಾ..
@ಗಣೇಶ್,
ಬಹಳ ಸಂತೋಷ!!
ಕಾಮೆಂಟಿಗೆ ಧನ್ಯವಾದಗಳು.
@ವಿಕಾಸ್,
:-)
ನಾಳೆ ತಿರುಗಿ ನೋಡಿದ್ರೆ, ಇವತ್ತು ನಿನ್ನೆ ಹಂಗೆ ಕಾಣ್ತು!
@ಸುಶ್ರುತ,
ಥ್ಯಾಂಕ್ಸಮ.. btw, ಇನ್ನು ಓದ್ತೆ ಅಂತಾತು ನನ್ ಬ್ಲಾಗ!!? :)
You really took through those days...have a great weekend there.
I am going to miss hostel day this time....again !
>> ಶ್ರೀಪತಿಯ ಕಟ್ಟೆಯಲ್ಲಿ ಕುಳಿತು ಹೇಮಾವತಿಯ ಕಡೆಯಿಂದ ಕಾಲೇಜಿಗೆ ಬರುವ ಹುಡುಗಿಯರ ನೋಡಿ ಕಣ್ಣು ತಂಪುಮಾಡಿಕೊಳ್ಳಬೇಕು.
ಸೀಕ್ರೆಟ್ ಎಲ್ಲ ಹಂಗೆ ಹೇಳಡ್ದೋ...
ಅಂದ್ ಹಂಗೆ.. "ಆಹಾರ್" ಅಲ್ಲಿ ಐದು ರೂಪಾಯಿ ಮಸಾಲೆ ದೋಸೆ ಹೋಗಿ ಎಷ್ಟೋ ವರ್ಷ ಆತು... ಇನ್ನೂ ಯಾವ್ ಕಾಲ್ದಲ್ಲಿದ್ದೆ?
ನಾನು ದಾವಣಗೆರೆಯಲ್ಲಿ ಹೆಚ್ಚಿಗೆ ಓಡಾಡಿಲ್ಲ.
ಹಾಗಂತ ಇದು ಬರಿಯ ದಾವಣಗೆರೆಯ ಬಗೆಗಿನ ಬರಹವೂ ಅಲ್ಲ. ತುಂಬ ಖುಷಿ ಆತು.
ಅಲ್ದೋ.. ಹೋದ ವಾರ ಹೋಗಿದ್ರೆ ಹಂಗೆ ದವನನೂ ನೋಡ್ಕ್ಯಂಡ್ ಬರ್ಲಕ್ಕಿತ್ತಲಾ..
ತುಂಬಾ ಚನ್ನಾಗಿ ಬರದ್ದೆ.
ಲೀಸ್ಟ್ ನಲ್ಲಿ ಬರೆದಿದ್ದೆಲ್ಲಾ ಪೂರೈಸ್ಕೆಂಡು ಬಂದ್ಯಾ?
ಹೆಂಗಿದ್ದು ದಾವಣಗೆರೆ?
ಯಾಕೋ ಇದನ್ನಾ ಓದಿದ ಮೇಲೆ ನಂಗೆ ಸಾಗರಕ್ಕೆ ಹೋಪನ ಕಾಣ್ತಾ ಇದ್ದು.
@sharath,
We all missed you immu!
@harish,
1. ಅದೆಲ್ಲಾ open secretu!:)
ನಾನಿನ್ನು ಆ ಕಾಲ್ದಲ್ಲೆ ಇದ್ದಿ.
2. ದವನದ ಸುದ್ದಿ ಸುಮಾರ್ ಕೇಳಿದಿ, ಹೋಗಕ್ಕಾಗಿತ್ತು ಅನ್ಸ್ತಾಇದ್ದು..
@ಶ್ರೀನಿಧಿ,
ಧನ್ಯವಾದ!!
"ಹಾಗಂತ ಇದು ಬರಿಯ ದಾವಣಗೆರೆಯ ಬಗೆಗಿನ ಬರಹವೂ ಅಲ್ಲ." - Good line!
@ರಂಜನಾ,
ಥ್ಯಾಂಕ್ಸ್ ರಂಜನಾ,
ಎಲ್ಲದೂ ಆಗಲ್ಲೆ.. ಆದ್ರೆ ಸುಮಾರೆಲ್ಲ ಮುಗುತ್ತು.
ಸಕ್ಕತ್ತಾಗಿತ್ತು :-)
ಸಂದೀಪಾ,
ವಿಷಯ ತುಂಬ ಇಷ್ಟ ಆತು. ನಂಗೆ ಯಾರನ್ನೂ ಹೋಲದ ನಿನ್ನ ಎಂದಿನ ಬರಹದ ಶೈಲಿಯೇ ಇಷ್ಟ. ಆದ್ರೂ ಈ ಸಲ ಬೆಳಗೆರೆಯ ಶೈಲಿ ಸಿಕ್ಕಾಪಟ್ಟೆ ಇದ್ದು.. ಯಾಕೋ ಇಷ್ಟವಾಗಲ್ಲೆ.
ಅದು ಬಿಟ್ಟು ನಿನ್ನ ಭಾವಪ್ರಪಂಚ ಮತ್ತು ನೆನಪುಗಳು ಅದ್ಭುತ ಮತ್ತು ಆಕ್ಯುರೇಟ್. ಆ ಎಲ್ಲ ವ್ಯಕ್ತಿಗಳು, ಜಾಗ, ದಾರಿ, ಅಲ್ಲೇಳುವ ಹಬೆ, ತಂಗಾಳಿ ಎಲ್ಲವೂ ಓದುವಾಗ ನಾನೆ ಅನುಭವಿಸಿದಷ್ಟು ಸ್ಪಷ್ಟವಾಗಿ..
ಥ್ಯಾಂಕ್ಸ್.
ಪ್ರೀತಿಯಿಂದ
ಸಿಂಧು
@ಸಿಂಧು,
೧. ಸಂದೀಪ ಸಾಕು, "ಪಾ" ಬ್ಯಾಡ!
೨. "ಬೆಳಗೆರೆಯ ಶೈಲಿ.." - ಎಂತಹ ವಿಚಿತ್ರ! ಗೊತ್ತಿಲ್ಲೆ, ನೀ ಹೇಳಿದ್ಮೇಲೆ ನಾನು ಆ ಬೆಳಗೆರೆ ಬರ್ಯದನ್ನ ಓದೊ ನನ್ ಫ್ರೆಂಡ್ಸ್ ಹತ್ರ ಕೇಳಿದಿ ಏನು ಶೈಲಿ ಅದು ಅಂತ. ನಾನು ಬೆಳಗೆರೆ ಓದದಿಲ್ಲೆ. ಮತ್ತು ಆ ಶೈಲಿ ಬಗ್ಗೆ ತಿಳ್ಕಳ ಉತ್ಸಾಹನೂ ಇಲ್ಲೆ. ಇರ್ಲಿ..
೩. ಕಾಮೆಂಟಿಸಿದ್ದಕ್ಕೆ ಥ್ಯಾಂಕ್ಸ್!
Post a Comment