ಕೆಲವು ವಾರಗಳ ಹಿಂದಿನ ಒಂದು ರಾತ್ರಿ. ಸುಮಾರು ಹತ್ತೂವರೆಯಾಗಿದ್ದಿರಬಹುದು. ಮನೆಯ ಬಳಿಯಿರುವ ಶಾಂತಿಸಾಗರದಲ್ಲಿ ಶಾಂತ ಮನಸ್ಸಿನಿಂದ ನನ್ನ ಎರಡನೆಯ ಸುತ್ತಿನ ಮೊದಲನೆ ಮಸಾಲೆ ದೋಸೆಯನ್ನು ಸವಿಯುತ್ತಿದ್ದೆ. ಎಂದಿನಂತೆ ಹೋಟೆಲ್ಲಿನಲ್ಲಿ ಸಾಕಷ್ಟು ಜನರಿದ್ದರು. ಹತ್ತಿರದಲ್ಲೇ ಯಾರೋ "ಅಂಕಲ್" ಎಂದು ಕರೆದಂತಾಯಿತು. ಮೊದಲ ಬಾರಿ ಅಲಕ್ಷಿಸಿದೆ. ಆದರೆ ಎರಡನೇ ಬಾರಿ ಮತ್ತೆ "ಅಂಕಲ್" ಎಂದು ಕರೆದದ್ದು, ಅದೂ ಈ ಬಾರಿ ಇನ್ನೂ ಹತ್ತಿರದಿಂದಲೇ ಧ್ವನಿ ಕೇಳಿದಂತಾಗಿ, ತಿರುಗಿ ನೋಡಿದೆ. ನನ್ನ ಬೆನ್ನಿನ ಬದಿಯಲ್ಲಿ ಒಬ್ಬ ಹುಡುಗ ನಿಂತಿದ್ದ. ಅವನ ಮುಖ ನೋಡಿದಾಗ ಅವನು ಕರೆದಿದ್ದು ನನ್ನನ್ನೇ ಎಂದು ಖಾತ್ರಿಯಾಯಿತು. ಸುಮಾರು ೧೨-೧೩ ವರ್ಷದವನಿರಬಹುದು. ಉದ್ದಕ್ಕೆ, ಬಡಿ ಬಡೀ ಇದ್ದ. ಅವನು ಧರಿಸಿದ್ದ ತಿಳಿ ನೀಲಿಗೆರೆಯ ಬಿಳಿ ಅಂಗಿ ಮತ್ತು ಕಡು ನೀಲಿ ಬಣ್ಣದ ಚಡ್ಡಿಯನ್ನು ನೋಡಿದರೆ, ಅದು ಯಾವುದೇ ಶಾಲೆಯ ಸಮವಸ್ತ್ರವೆಂಬುದು ಸ್ಪಷ್ಟವಾಗುವಂತಿತ್ತು.
"ಏನು" ಎನ್ನುವಂತೆ ಅವನ ಮುಖನೋಡಿದೆ.
"ಸರ್.. Excuse me ಸರ್.. " ಎಂದ..
ಈ ಬಾರಿ ಬಾಯಿಬಿಟ್ಟು "ಏನು" ಎಂದು ಕೇಳಿದೆ.
ಧೈರ್ಯ ಬಂದವನಂತೆ ಸ್ವಲ್ಪ ಚುರುಕಾಗಿ ನನ್ನ ಪಕ್ಕ ಬಂದು ನನಗೆ ಅವನ ಮುಖ ಕಾಣುವಂತೆ ನಿಂತುಕೊಂಡ. ಕೈಯಲ್ಲಿ ೧೦ರೂ. ನ ಮೂರ್ನಾಲ್ಕು ನೋಟು ಹಿಡಿದುಕೊಂಡಿದ್ದ ಆ ಹುಡುಗ. ಇಲ್ಲಿ ಬರೆದರೆ ನಾಲ್ಕೈದು ಸಾಲಾಗಬಹುದಾದಂತಹ ಒಂದು ಉsssದ್ದ ವಾಕ್ಯವನ್ನು ಕೈಕಟ್ಟಿಕೊಂಡು, ಹೇಳಿದ. ಒಮ್ಮೆ ಹೇಳಿದ್ದನ್ನೆ ಮತ್ತೊಮ್ಮೆ ಇಂಗ್ಲೀಷಿನಲ್ಲಿ ಹೇಳಿದ.
ಸಾರಾಂಶ ಏನಪಾ ಅಂತಂದ್ರೆ: ಅವನಿಗೆ ಶಾಲೆಗೆ ಹೋಗಲು ದುಡ್ಡಿಲ್ಲಿದ್ದರಿಂದ ಸಹಾಯ ಕೇಳುತ್ತಿದ್ದ..
ಸರಿ..
"ಮನೆ ಎಲ್ಲಿ?" ಎಂದೆ.
"ಇಲ್ಲೇ ಸಾರ್, ಗಾಯತ್ರಿ ನಗರ" ಎಂದ.
"ಊಟ ಆಯ್ತಾ" ಎಂದರೆ... ಮುಖದಲ್ಲಿ ವಿಚಿತ್ರ ಬಾವನೆ ಮೂಡಿಸಿ ತಲೆ ಕೆರೆದುಕೊಳ್ಳುತ್ತಾ.. "ಸಾರ್, ಸ್ಕೂಲ್ ಫೀಸು" ಎಂದು ರಾಗ ಎಳೆದ.
"ಗಾಯತ್ರಿ ನಗರ ತಾನೆ? ನಾನೆ ಬಿಡ್ತೀನಿ ಮನೆಗೆ ಇಲ್ಲೇ ಇರು, ಹೋಗೋಣ" ಎಂದು ಅವನ ಮುಖವನ್ನೇ ಗಮನಿಸಿದೆ. ಈ ಮಾತಿನಿಂದ ಅವನು ಆಶ್ಚರ್ಯಗೊಂಡಿದ್ದು ಮಾತ್ರವಲ್ಲ ಸ್ವಲ್ಪ ಹೆದರಿಕೊಂಡಂತೆ ಕಂಡುಬಂದ.
ಒಂದರ್ಧ ನಿಮಿಷ ಸುಮ್ಮನಿದ್ದವನು, ನಂತರ ಹೇಳಿದ..
"ಸಾರ್, ಮನೆ ಇರೋದು ಇಲ್ಲಲ್ಲ; ಮತ್ತೀಕೆರೆಲ್ಲಿ. ಇಲ್ಲಿ ಅಜ್ಜಿ ಮನೆಗೆ ಬಂದಿದ್ದೆ ಅಷ್ಟೆ."
ನನ್ನ ಮನಸ್ಸಿನಲ್ಲಿ ಏನೋ ತಿಳಿಯದ ಅನುಮಾನ ಮೂಡುತ್ತಿತ್ತು. ಹಾಗೆಂದೇ ಹೇಳಿದೆ
"ನನ್ನ ರೂಂಮೇಟು ಅಲ್ಲಿಗೇ ಹೋಗ್ತಾ ಇದಾನೆ. ಇಷ್ಟೊತ್ನಲ್ಲಿ ಒಬ್ನೇ ಹೇಗ್ ಹೋಗ್ತೀಯ, ಅವ್ನು ಬಿಡ್ತಾನೆ"
"ಬ್ಯಾಡ ಸಾರ್, ಸುಮ್ನೆ ಯಾಕ್ ತೊಂದ್ರೆ" ಎಂದು ನಕ್ಕವನೇ ಅತ್ತ ತಿರುಗಿ ಹೊರಟುನಿಂತ..
ಅವನು ಕೇಳಿದ ದುಡ್ಡಿಗೆ ನಾನೇನೂ ಉತ್ತರವನ್ನೇ ಹೇಳಿರಲಿಲ್ಲ.
"ಇರು ಕೈತೊಳ್ಕೊಂಡ್ ಬರ್ತೀನಿ" ಎನ್ನುವಷ್ಟರಲ್ಲೆ ಅವನು ಫುಟ್ಪಾತಿನಲ್ಲಿ ಜೋರು ಜೋರು ಹೆಜ್ಜೆಯಿಡುತ್ತಾ ಹೋಗುತ್ತಿರುವುದು ಕಂಡಿತು.
ಅವಸರದಲ್ಲಿ ಕೈತೊಳೆದು ಅವನು ಹೋದ ದಿಕ್ಕಿನಲ್ಲೇ ಸರಸರನೆ ನಡೆದು ಎಲ್ಲಾದರು ಕಾಣುತ್ತಾನೆನೊ ಎಂದು ನೋಡಿದೆ. ಎದುರಿನ ಬಸ್ ಸ್ಟ್ಯಾಂಡಿನಲ್ಲೂ ಇರಲಿಲ್ಲ.. ಮತ್ತೀಕೆರೆಗೆ ನಡೆದುಕೊಂಡು ಹೊರಟಿರುವ ಸಾದ್ಯತೆಯೂ ಕಡಿಮೆಯೆ.
ಏನೋ, ತಲೆಯಲ್ಲೆಲ್ಲಾ ಗೊಂದಲವೇ ತುಂಬಿದಂತಾಗಿ, ಒಮ್ಮೆ ಜೋರಾಗಿ ತಲೆಕೊಡವಿ ಮರಳಿ ಹೋಟೆಲ್ ಬಳಿಹೋಗಿ ಒಂದು ಬಿಳಿ ಎಲೆ ಸ್ವೀಟ್ ಹಾಕಿ ಮೋಡದ ಮರೆಯ ಚಂದಿರನನ್ನೇ ನೋಡುತ್ತಾ ಮನೆಕಡೆ ನಡೆದೆ..
Thursday, July 24, 2008
Subscribe to:
Post Comments (Atom)


16 comments:
same caseಉ ನಮಗೂ ಮೆಜೆಸ್ಟಿಕ್ಕಿನಲ್ಲಿ , ಅದೇ ವಯಸ್ಸಿನ ಹುಡುಗ "ಅಂಕಲ್, ಮನೆ ಯಲಹಂಕದಲ್ಲಿ, ಬಸ್ಸಿಗೆ ದುಡ್ಡಿಲ್ಲ". ನಾಲ್ಕು ಕ್ರಾಸ್ ಕ್ವೆಶ್ಚನ್ ಮಾಡಿದರೆ ಉತ್ತರವಿಲ್ಲ.! ಎಲ್ಲಾ ವ್ಯವಸ್ಥಿತ ಧಂದೆ. ಟೀವಿ ಚಾನಲ್ಲುಗಳಿಂದ ಹಿಡಿದು ಎಲ್ಲೆಡೆ ಭಾವನೆಗಳ encashmentu :(
ಹೂ, ನಂಗೂ ಈ ಥರ ಎಕ್ಸ್‌ಪೀರಿಯನ್ಸು ಎರಡ್ಸಲ ಆಗಿತ್ತು! ಮೊದಲ ಸಲ ಮಲ್ಲೇಶ್ವರದ ೮ನೇ ಕ್ರಾಸಿನಲ್ಲಿ ಒಣಗಿಹೋಗ್ತಿರೋ ಮಲ್ಲಿಗೆ ಹೂವು ಹಿಡ್ಕೊಂಡು ಎಕ್ಸಾಂ ಫೀಸು ಅಂದ. ನಾಳೆನೇ ಲಾಸ್ಟ್ ಡೇಟ್ ಅಂದಾಗ ನಾನೂ ನನ್ನ್ ತಮ್ಮ ಪೆದ್ದು ಪೆದ್ದಾಗಿ ಅಯ್ಯೋ ಅಂದು ಟೋಪಿ ಹಾಕ್ಸಿಕೊಂಡ್ವಿ! ಇನ್ನೆರಡು ವಾರ ಬಿಟ್ಟು ನಾನು ನನ್ನ್ ಸ್ನೇಹಿತೆ ಸ್ಯಾಂಕಿ ಹತ್ರ ನಡ್ಕೊಂಡು ಹೋಗ್ತಿದ್ದಾಗ ಅದೇ ಹುಡುಗ ಮತ್ತೆ ಅದೇ ರಾಗ, ಮತ್ತೆ ನಾಳೆನೇ ಲಾಸ್ಟ್ ಡೇಟು ಫೀಸ್ ಕಟ್ಟೋಕೆ! ಅವತ್ತು ೮ನೇ ಕ್ರಾಸ್‌ನಲ್ಲಿ ಇದೇ ಕಥೆ ಹೇಳ್ದವ್ನು ನೀನೇ ಅಲ್ವೇನೋ ಅಂತ ಆವಾಜ್ ಹಾಕ್ದೆ. ಪಾರ್ಟಿ ಒಂದೇ ಕ್ಷಣಕ್ಕೆ ಸೈಕಲ್ ಹತ್ತಿ ಪರಾರಿ!!
ಸಂದೀಪ,
ಒಳ್ಳೆಯ ಶೇರಿಂಗ್..
ನನ್ನ ಅನುಭವ ಇದಕ್ಕಿಂತ ಏನೂ ಭಿನ್ನವಾಗಿಲ್ಲ. ನಂಗೆ ಎಕ್ಶಾಮ್ ಫೀ ನವರು ಸಿಕ್ಕಿಲ್ಲ. ಮನೆಯಲ್ಲಿ ನಾಲ್ಕು ದಿನದಿಂದ ಊಟಕ್ಕಿಲ್ಲದವರು.. ಬಾ ಮನೆಗೆ ಹೋಗೋಣ ಊಟ ಕಟ್ಟಿಸಿಕೊಂಡು ಅಂದ್ರೆ, ಇಲ್ಲ ದುಡ್ ಕೊಡಿ ಬ್ರೆಡ್ ತಗೊಂಡ್ ಹೋಗ್ತೀನಿ ಅಂದವರು.. ಬೇಸರ ಮೂಡುತ್ತೆ. ಅವರ ದಂಧೆ ನೋಡಿ ಜೊತೆಗೇ ಅಂತಹ ಸ್ಥಿತಿಗೆ ಇಳಿದುಹೋಗಿರುವ ಅವರ ಜೀವನ ನೋಡಿ..
ಪ್ರೀತಿಯಿಂದ
ಸಿಂಧು
@ವಿಕಾಸ್,
ನನಗೂ ಇದು ಮೊದಲನೆಯ ಅನುಭವವೇನೂ ಅಲ್ಲ.
ಕೊನೆಯದೂ ಅಲ್ಲ ಅನ್ಸ್ತು!!
@sree,
ಹೌದು. ಇಂತವರು ತುಂಬಾ ಸ್ಥಳಗಳಲ್ಲಿ ಸಿಕ್ಕುತ್ತಾರೆ. ಆದರೆ ಇಂತಹ ಘಟನೆಗಳು ನೆನಪಿನಲ್ಲಿ ಉಳಿಯುವುದೇಕೆಂದರೆ, ಆ ಒಂದು ಅರ್ಧ ನಿಮಿಷದಲ್ಲಿ ವ್ಯಕ್ತಿಯನ್ನು ಅಳೆಯುವ ಅನಿವಾರ್ಯತೆ ಮತ್ತು ಕೆಲವೊಮ್ಮೆ ಉಳಿದುಕೊಂಡುಬಿಡುವ ನಮ್ಮ ತೀರ್ಮಾನದ ಬಗ್ಗೆ ನಮ್ಮೊಳಗಿನ ಅನುಮಾನ!!
@ಸಿಂಧು,
ಅಹುದು. ಬೇಜಾರಾಗುತ್ತದೆ..
ಯಾರ ಬಗ್ಗೆ? ಯಾವುದರ ಬಗ್ಗೆ?
that varies...
ನಂಗೂ ಈ ಥರ ಅನುಭವ ಎರಡು ಸಲ ಆಗಿತ್ತು. ವ್ಯತ್ಯಾಸ ಏನು ಅಂದ್ರೆ ಎರಡೂ ಸಲ ಬಂದು ಮನೆಗೆ ಹೋಗಕ್ಕೆ ದುಡ್ಡಿಲ್ಲ ದುಡ್ಡು ಕೊಡಿ ಅಂತ ಬಂದಿದ್ದು ಚಿಕ್ಕ ಹುಡುಗ ಅಲ್ಲ ಸಲ್ಪ ವಯಸ್ಸಾದ ವ್ಯಕ್ತಿ!
"ಇಂತಹ ಘಟನೆಗಳು ನೆನಪಿನಲ್ಲಿ ಉಳಿಯುವುದೇಕೆಂದರೆ, ಆ ಒಂದು ಅರ್ಧ ನಿಮಿಷದಲ್ಲಿ ವ್ಯಕ್ತಿಯನ್ನು ಅಳೆಯುವ ಅನಿವಾರ್ಯತೆ ಮತ್ತು ಕೆಲವೊಮ್ಮೆ ಉಳಿದುಕೊಂಡುಬಿಡುವ ನಮ್ಮ ತೀರ್ಮಾನದ ಬಗ್ಗೆ ನಮ್ಮೊಳಗಿನ ಅನುಮಾನ!"
-Yep! ಅದು, ಅದು ಪಾಯಿಂಟು!
ಉದರದೈವಕೆ ಜಗದೊಳೆದುರು ದೈವವದೆಲ್ಲಿ ಮೊದಲದರ ಪೂಜೆ ಮಿಕ್ಕೆಲ್ಲವದರಿಂದ ।
ಮದಿಸುವುದದಾದರಿಸೆ ಕುದಿವುದು ನಿರಾಕರಿಸೆ ಹದದೊಳಿರಿಸುವುದೆಂತೊ ಮಂಕುತಿಮ್ಮ ।।
ನಂಗೂ ಇಂಥ ಎರಡು ಅನುಭವ ಇತ್ತೀಚಿಗೆ ಆಯ್ದು.. ಡ್ರಾಫ್ಟ್ ಮಾಡಿಟ್ಟಿದ್ದಿ ಪೋಸ್ಟ್ ಮಾಡಲೆ ಟೈಮ್ ಆಗಲ್ಲೆ!
ಸಂದೀಪ...
ಹ್ಮ್...ಬೇಜಾರಾಗ್ತಲ್ದಾ...? ಪಾಪ ಅಂತನೂ ಅನಿಸ್ತಾ ಇದ್ದು ಎಂತಕ್ಕೊ...
ರಾಜಾಜಿ ನಗರ್ ಅಲ್ಲಿ ಒಬ್ಬ ಹುಡುಗ ಹೂವು ಮಾರ್ತಾ ಇದ್ದಿದ್ದ. ‘ಪ್ಲೀಸ್..ತಗೋಳಿ, ಹೂವೆಲ್ಲ ಹೀಗೆ ಇಟ್ಕೊಂಡ್ ಮನೆಗೋದ್ರೆ ಚಿಕ್ಕಮ್ಮ ಬಯ್ತಾರೆ’ ಅಂದ. ಗಡಿಬಿಡಿಯಲ್ಲಿದ್ದಿದ್ದಿ. ಹತ್ತು ರೂಪಾಯ್ ತೆಗ್ದು ಕೊಟ್ಟಿ ‘ಇಟ್ಕೋ.. ಹೂ ಬೇಡ,ಇದೆ ಮನೇಲಿ’ ಅಂತಂದಿ. ‘ಬೇಡ’ ಹೇಳಿಕ್ ಆಚೆ ಹೋದ. ದುಡ್ ತಗಳ್ಲೆ. ನಂಗೆ ಬೇಜಾರಾತು. ಇಂತವರನ್ನೆಲ್ಲ ಅಳೆಯಕೆ ಗೊತಾಗದೇ ಇಲ್ಲೆ. ಈಗಿಲ್ಲಿ ನೆನಪಾದಾಗ ಬೇಜಾರಾಗ್ತು ಅಷ್ಟೆ :(
@ಶ್ಯಾಮಾ,
ಹಸಿವಿಗೂ ಮೋಹಕ್ಕೂ ವಯಸ್ಸಿಲ್ಲ!!
@ಸುಶ್ರುತ,
ಅದೇ ಪಾಯಿಂಟು ದೋಸ್ತ..!!
@ಗಿರೀಶ್,
ಚೆನ್ನಾಗಿದೆ, ಧನ್ಯವಾದಗಳು!
@ಹರೀಶ,
ಇಲ್ಲಿ ಕಾಮೆಂಟ್ ಹಾಕ ಟೈಮಲ್ಲೇ ಪೋಸ್ಟ್ ಮಾಡ್ಬುಡ್ಲಾಗಿತ್ತೇನ?!
@ಶಾಂತಲಾ,
ಕಷ್ಟ..
ಕೆಲವೊಂದ್ ಸಲ ಅನ್ಸದೂ ಇದ್ದು,
ದ್ವಂದ್ವಗಳೇ ಇಲ್ಲದ ಬದುಕು ಎಷ್ಟು ಸಪ್ಪೆಯಾರಿರ್ತಿಕ್ಕು ಅಂತ..
ಇವೆಲ್ಲ ಯಾಕೆ ಅಂತ ಇರಬೇಕು - ಇಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ನಲ್ಲಿ ಭಿಕ್ಷೆ ಬೇಡೋವ್ರು ( ಇವರು ಯಾರೂ ಚಿಕ್ಕ ಮಕ್ಕಳಲ್ಲ ಬಿಡಿ) - "Why lie? It's for beer" ಅನ್ನೋ ಬೋರ್ಡ್ ಹಾಕ್ಕೊಂಡು ಕೂತಿರ್ತಾರೆ.
ಇನ್ನೂ ಇದಕ್ಕಿಂತ ಆಶ್ಚರ್ಯದ ವಿಷಯ ಅಂದ್ರೆ, ಈ ಬೋರ್ಡು, ಅಂಗಡಿಗಳಲ್ಲಿಯೂ ಸಿಗತ್ತ್! ಇದಂತೂ commercialization ನ್ನಿನ ಪರಮಾವಧಿ ಅನ್ಸತ್ತೆ!
@hamsanandi: sakkath.. harishchandrana aparaavataara illuu sambhavisuva kaala doora illi.. alli varguu taaLme irli janakke...
@alpazna: intha excuse me gaLu genuine aagi tondre li irOr bagge nu anumaana untu maadutte, alvaa? illi, ee ooralli "kaNNidduu kuruDa"ra haage badukOru buddhivantarEnO antha ondondu sala ansbidutte..
@ಹಂಸಾನಂದಿ,
ಹೌದು, ನಾನು ನೋಡಿದೀನಿ ಆತರ ಬೋರ್ಡುಗಳನ್ನ..
@parisarapremi,
ಹಾಗ್ ಮಾಡಿದ್ರೆ ಇನ್ನೊಂತರ ತಲೆ ಬಿಸಿ..
ಭಿಕ್ಷೆ ಬೇಡುವುದು ಫ್ಯಾಷನ್ ಆಗಿಬಿಟ್ಟಿದೆ. ತುಂಬಾ ಸಲ ನಂಗೂ ಅನುಭವ ಆಗಿದೆ. ಆದರೆ ಅಂಥ ಮಕ್ಕಳನ್ನು ಕಂಡಾಗ ಮನಸ್ಸು ನೋಯುತ್ತೆ ಅಲ್ಲ...ಹೊಟ್ಟೆಗೇನಾದ್ರೂ ನೀಡ್ತೀನಿ.ಹಣ ಕೊಡಲ್ಲ.
-ಚಿತ್ರಾ
namaste..nimma blog eega tane nodide..
good one!!
keep it up!!
nimma baravaNigeya shaili chennagide.
cheers,
archana
@ಚಿತ್ರಾ,
ಹೌದು. ಆದ್ರೆ ಯಾವಗ್ಲು ತಿಂಡಿ ತಿನಿಸು ಬ್ಯಾಗಲ್ಲಿ ಇಟ್ಕೊಂಡ್ ಓಡಾಡೋದು ಸುಲಭ ಅಲ್ವಲ್ಲ?
@archu,
Welcome to my blog and thanks for comments.
Keep visiting.
Post a Comment