Tuesday, April 29, 2008

ಯಮನಿಯ ಮಗಳು

ಇಂದು ಮಧ್ಯಾಹ್ನದ ಊಟದ ಹೊತ್ತಿನಲ್ಲಿ ತಲೆಗೆ ಹೊಕ್ಕ "ಯಮನಿಯ ಮಗಳ" ವಿಚಾರ ಇನ್ನೂ ಅಲ್ಲೇ ಗಿರಕಿ ಹೊಡೆಯುತ್ತಿದೆ. ನನಗೆ ಯಮನಿಯ ಮಗಳ ಪರಿಚಯವಾಗಿದ್ದು ಸುಮಾರು ಹತ್ತು ವರ್ಷಗಳ ಹಿಂದೆ. ಕೇವಲ ಪರಿಚಯವಾಗಿತ್ತಷ್ಟೆ, ಹೆಚ್ಚಿನದೇನೂ ನಡೆದಿರಲಿಲ್ಲ. ಸ್ವಲ್ಪ ಸಮಯದ ನಂತರ ನಾನು ನಡೆದಿದ್ದನ್ನೆಲ್ಲ ಮರೆತುಬಿಟ್ಟಿದ್ದೆ. ಹಳೆಯ ನೆನಪನ್ನು ಮತ್ತೆ ಎಳೆದು ಎದುರಿಗೆ ತಂದಿದ್ದು, ಯಾವುದೋ ವಾರ್ತಾ ಪತ್ರಿಕೆಯ ಮೂಲೆಯಲ್ಲಿದ್ದ ಚಿಕ್ಕ ಸುದ್ದಿ.

"...... ಸ್ವಾಮಿಗಳು ತಮ್ಮ ಹನ್ನೆರಡನೆಯ ವಯಸ್ಸಿನಲ್ಲೇ ಯಮನಿಯ ಮಗಳ ಬೆನ್ನು ಹತ್ತಿದರು."

ಅದನ್ನು ಓದಿ ನಕ್ಕಿದ್ದೆ, ಮತ್ತೆ ಮರೆತಿದ್ದೆ..
ಈಗ ಮತ್ತೆ ನೆನಪಾಗಿದೆ, ಹಳೆಯ ನೆನಪು ಮರುಕಳಿಸಿದೆ.

ನೆನಪು ಮರುಕಳಿಸುವಂತೆ ಮಾಡಿದ್ದು ಮಧ್ಯಾಹ್ನದ menu. ಬರೆದವರಿಗೊಂದು ಥ್ಯಾಂಕ್ಸ್ ಹೇಳಲೇಬೇಕು.
ಅದರಲ್ಲಿ ಹೀಗೊಂದು item ಇತ್ತು..
"DOSA KAI PALYA"!

Saturday, April 26, 2008

ಎರಡು ಮತ್ತೊಂದು

ನಾನು ಇಲ್ಲಿ ಬ್ಲಾಗಲು ಶುರುಮಾಡಿಕೊಂಡು ಇವತ್ತಿಗೆ ಮೂರು ವರ್ಷವಾಯಿತು.

ಇನ್ನೆಷ್ಟು ದಿನ ಹೀಗೆ ಮುಂದುವರೆಯುತ್ತದೆಯೊ ಗೊತ್ತಿಲ್ಲ. ಬರೆಯುವ ಆಸೆ ಬತ್ತಿ ಹೋಗಿದೆಯೆಂದೇನೂ ಅಲ್ಲ; ಆದರೆ ಮೊದಲಿದ್ದ ಉತ್ಸಾಹ ಈಗಿಲ್ಲ, ಅಷ್ಟೆ.

ಭವಿಷ್ಯದ ಬಗೆಗೆ ಹೆಚ್ಚು ಚಿಂತೆ ಬೆಳೆಸದೆ, 'ಕಾದು ನೋಡುವ' ತಂತ್ರಕ್ಕೆ ಮೊರೆಹೋಗುವುದೆ ಲೇಸೆನಿಸುತ್ತಿದೆ.

Tuesday, April 22, 2008

ಬಾಗ್ಮನೆಗೆ ಬಂದಿದ್ದೇನೆ

ಸುಮಾರು ಮೂರು ವರ್ಷದ ಅವಧಿಯಲ್ಲಿ ಈ ಬ್ಲಾಗಿನಲ್ಲಿ ನಾನು ೧೨೫ ಪೋಸ್ಟುಗಳನ್ನು ಬರೆದಿದ್ದೇನೆ. ಕೆಲಸಕ್ಕೆ ಸೇರಿದಂದಿನಿಂದ ಅರ್ಧಕ್ಕಿಂತ ಹೆಚ್ಚಿನ ಸಮಯ ಆಫೀಸಿನಲ್ಲೇ ಕಳೆದಿದ್ದೇನೆ. ಆದರೂ, ನನ್ನ ಬ್ಲಾಗಿನಲ್ಲಿ ಕೆಲಸಕ್ಕೆ ಅಥವಾ ಆಫೀಸಿಗೆ ಸಂಬಂಧಿಸಿದ ಮೂರ್ನಾಲ್ಕು ಪೋಸ್ಟುಗಳು ಹುಡುಕಿದರೂ ಸಿಗಲಾರವೆಂದು ಅರಿತಾಗ ನನಗೇ ಆಶ್ಚರ್ಯವಾಯಿತು.

ಹಾಗೆಂದು ಇಂದಿನಿಂದ ಆಫೀಸಿನ ಕತೆಗಳು ಇಲ್ಲಿಗೆ ಬರುತ್ತವೆಂದು ನಿರೀಕ್ಪಿಸಬೇಡಿ. ಅಂತದ್ಯಾವ ಯೋಚನೆಯೂ ಸದ್ಯಕ್ಕಿಲ್ಲ.

ನಾನು ಎಲ್ಲಿ ಕೆಲಸ ಮಾಡುತ್ತೇನೆ, ಏನು ಕೆಲಸ ಮಾಡುತ್ತೇನೆ, ಏಕೆ ಕೆಲಸ ಮಾಡುತ್ತೇನೆ ಎಂದು ಇಲ್ಲಿಯವರೆಗೆ ಬರೆದುಕೊಂಡಿರಲಿಲ್ಲ. ನಿನ್ನೆ ಆದ ಒಂದು ಸಣ್ಣ ಬದಲಾವಣೆ. ಬರೆಯಬೇಕೆನಿಸಿತು. ನಾನು ಈಗ C V Raman ನಗರದ ಬಾಗ್ಮನೆ ಟೆಕ್ ಪಾರ್ಕ್ ನಲ್ಲಿರುವ್ ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ.

ಹೊಸ ಸ್ಥಳವಾದ್ದರಿಂದ ಆಗಾಗ ಬೋರಾಗುತ್ತದೆ. ಗೆಳೆಯರು/ಪರಿಚಿತರು ಯಾರಾದರು ಹತ್ತಿರ ಇದ್ದಾರೆಯೋ ಹುಡುಕಬೇಕು, ಹೇಗೆಂದು ತೋಚುತ್ತಿಲ್ಲ!

ನೀವ್ಯಾರಾದ್ರು ಇಲ್ಲೇ ಕೆಲ್ಸ ಮಾಡ್ತೀರ?

ಅಂದಹಾಗೆ, ಆಫೀಸಿಗೆ ಫೋನು ಮಾಡುತ್ತಿದ್ದವರು ದಯವಿಟ್ಟು ಹಳೆಯ ನಂಬರನ್ನು ಅಳಿಸಿಬಿಡಿ.

Wednesday, April 16, 2008

ಡೊಳ್ಳ

ಕೃಷ್ಣ ಹಾಸ್ಟೆಲ್ಲಿನ ೩೬ನೇ ವಾರ್ಷಿಕೋತ್ಸವದ ಅಮಿತ ಉತ್ಸಾಹದ ನಡುವೆಯೂ ನನಗೆ ಎದ್ದು ಕಾಣುತ್ತಿದ್ದುದು ಡೊಳ್ಳನ ಅನುಪಸ್ಥಿತಿ. ಡೊಳ್ಳನ ಬಗ್ಗೆ ಮತ್ತೊಮ್ಮೆ ಸವಿವರವಾಗಿ ಬರೆಯುತ್ತೇನೆ. ಸದ್ಯ ನೆನಪಾಗುತ್ತಿರುವುದು ೨೦೦೨ರ ಸಂಜೆ ಕೃಷ್ಣ ಹಾಸ್ಟೆಲಿನ ೬ನೇ ನಂಬರ್ ರೂಮಿನಲ್ಲಿ ಶಶಿಧರ ಭಟ್ಟ ರಚಿಸಿದ ಹಾಡು.
ಮೊನ್ನೆ ಅವ ಸಿಕ್ಕಾಗ ನನ್ನ ನೆನಪಿನಲ್ಲಿದ್ದನ್ನು ಅವನೆದುರು ಹೇಳಿ ಗಟ್ಟಿ ಮಾಡಿಕೊಂಡೆ. ಊಟಕ್ಕೆ ಹೊತ್ತಾಯಿತೆಂದೋ ಏನೋ ಅಂದು ಆ ಹಾಡು ಅಷ್ಟಕ್ಕೇ ನಿಂತು ಹೋಯಿತು. ಮೊನ್ನೆ ಡೊಳ್ಳ ಬಂದಿದ್ದರೆ ಮತ್ತೆ ಮುಂದುವರಿಸಬಹುದಿತ್ತು!

(ಧಾ: ದಾಸನಾಗು ವಿಶೇಷನಾಗು)
ದಾವಣ್ಗೆರೆ ಊರಿನಲ್ಲಿ
ಶ್ರೀಕೃಷ್ಣ ಹಾಸ್ಟೆಲ್ನಲ್ಲಿ
ಆರನೆ ನಂಬರ್ ರೂಮಿನಲ್ಲಿ
ಇದ್ದ ಡೊಳ್ಳ..

ಜಿಮ್ ಮಾಡ್ದss
ಜಿಮ್ ಮಾಡ್ದಾ ಬಾಡಿ ಬಿಲ್ಡ್ ಮಾಡ್ದ
ಊರಿಗ್ ಹೀರೋ ಆದ,
ಹೀರೋಹಿನ್'ಗೆ ಹುಡುಕ್ದss..

ಡೊಳ್ಳಬಾರೋ ಸೂಳೆಗೆರೆ ಹೀರೋ..
ಡೊಳ್ಳಬಾರೊ... ಸೂಳೆಗೆರೆ ಹೀರೋ..

Wednesday, April 09, 2008

SKVN ದಾವಣಗೆರೆ

krishna_folks ಎಂಬ ಗ್ರೂಪಿಗೆ ಹಾಗೇ ತಣ್ಣಗೆ ಬಂದು ಕುಳಿತ ಈ ಆಹ್ವಾನ ಪತ್ರಿಕೆ ಮನಸ್ಸಿನ ಮೂಲೆಯಲ್ಲಿದ್ದ ನೆನಪುಗಳನ್ನೆಲ್ಲಾ ಒಟ್ಟೊಟ್ಟಿಗೆ ಕೆದಕಿ ಧೂಳೆಬ್ಬಿಸಿದೆ.


ಎರಡೆರಡು ಇ-ಪತ್ರದ ಆಹ್ವಾನದ ಜೊತೆಗೆ ಫೋನು ಬೇರೆ ಮಾಡಿ ಕರೆದಿದ್ದಾರೆ. ಹಾಗೇ ತಿನ್ನುವವನಿಗೆ ಸಿಪ್ಪೆ ಸುಲಿದುಕೊಟ್ಟಂತೆ, ದಾವಣಗೆರೆಗೆ ಹೋಗಲು ಸದಾ ಏನಾದರೊಂದು ನೆವ ಹುಡುಕುತ್ತಿರುವ ನನ್ನಂಥ ನನಗೆ ಈ ಆಹ್ವಾನ!

ಬೇರೆ ಎಲ್ಲಾ ಕೆಸಲಗಳನ್ನು ಬದಿಗೆ ಗಟ್ಟಿ ಒತ್ತಿ, ನಾಡಿದ್ದು ಶುಕ್ರವಾರ ರಾತ್ರಿ ದಾವಣಗೆರೆಗೆ ಹೊರಟು ನಿಂತಿದ್ದೇನೆ, ತುದಿಕಾಲಿನಲ್ಲಿ ಎಂದು ಮತ್ತೆ ಹೇಳುವುದು ಬೇಕಿಲ್ಲ.

ಮೊನ್ನೆ ಊರಿನಿಂದ ಬರುವಾಗ ದಾವಣಗೆರೆಯಲ್ಲಿ ಬೆಣ್ಣೆದೋಸೆ ತಿಂದು ಬಂದಿದ್ದು ಹೌದಾದರೂ, ಅಂದು ಬೇರೆ ಯಾವುದಕ್ಕೂ ಪುರುಸೊತ್ತಿರಲಿಲ್ಲ. ಹೊತ್ತು ಮುಳುಗುವುದರೊಳಗೆ ಬೆಂಗಳೂರು ಸೇರಬೇಕಿತ್ತು. ಆದರೆ ಈ ವಾರಾಂತ್ಯ ಹಾಗೇನಾಗುವುದಿಲ್ಲ. ಎರಡು ಪೂರ್ತಿ ದಿನಗಳನ್ನು ದಾವಣಗೆರೆಯಲ್ಲಿ ಕಳೆಯಬಹುದು.

ಎಷ್ಟೊಂದು ಕೆಲಸಗಳಿವೆ ಮಾಡಲಿಕ್ಕೆ. ಅಪರೂಪಕ್ಕೊಮ್ಮೆ ಹೋದರೆ ದಿನವಿಡೀ ತಿರುಗುವುದರಲ್ಲೇ ಕಳೆದು ಹೋಗುತ್ತದೆ.

ಕಳೆದಬಾರಿ ಹೋದಾಗ ಬಸವರಾಜಪ್ಪನವರನ್ನು ಕಾಣಲೇ ಆಗಲಿಲ್ಲ. ಈ ಬಾರಿ ತಪ್ಪದೇ ಹೋಗಿಬರಬೇಕು. ಬಹಳ ಸಂತೋಷಪಟ್ಟುಕೊಳ್ಳುವ ಜೀವ.

ವಿದ್ಯಾನಗರದಲ್ಲಿ ಸ್ಟಾಪಿಲ್ಲದ್ದಕ್ಕೆ ಸ್ಲೋ ಮಾಡಿದ ಬಸ್ಸಿನಿಂದ ಹಾರಿಕೊಂಡು, ಬೆನ್ನಿಗೇರಿಸಿದ ಬ್ಯಾಗಿನ ಬೆಲ್ಟನ್ನು ಬಿಗಿಮಾಡಿಕೊಂಡು ಕೃಷ್ಣ ಹಾಸ್ಟೆಲ್ ತನಕ ನಡುರಾತ್ರಿಯಲ್ಲಿ ನಡೆದುಕೊಂಡು ಹೋಗಬೇಕು.

ಮಲಗಿಕೊಂಡ ಮಾಲತೇಶನನ್ನು ಕೂಗಿ ಕೂಗಿ ಕೂಗಿ ಕರೆದು ಎಬ್ಬಿಸಬೇಕು. ಅವನೆದ್ದು ಬಂದು ಗೇಟು ತೆಗೆಯುವವರೆಗೆ ಕಾಯಲಾಗದೆ ಕಂಪೌಂಡ್ ಹತ್ತಿ, ಮಹಡಿಯ ಮೇಲೆ ಜಿಗಿಯಬೇಕು.

ಬೆಳಿಗ್ಗೆ ಎದ್ದು "ವಾಸು" ಬಳಿ ಮಾತನಾಡಿ, ಭಟ್ಟರು ಮಾಡಿದ ತಿಂಡಿಯ ಬಗ್ಗೆ ಗೊಣಗುಡುತ್ತ "ಶ್ರೀನಿಧಿ"ಗೆ ಹೋಗಿ ಅವಲಕ್ಕಿ ತಿಂದು ಅರ್ಧ ಕಾಫಿ ಕುಡಿಯಬೇಕು.

ಬೇಗ ಒಂದು ತಣ್ಣೀರ್ ಸ್ನಾನ ಮುಗಿಸಿ, ಕ್ಲಾಸಿಗೆ ಹೋಗುವ ಜೂನಿಯರ್ ಹುಡುಗರ ಜೊತೆ ವಾಟರ್ ಟ್ಯಾಂಕ್ ನ ವರೆಗೆ ನಡೆದು ಅಲ್ಲಿ ಮರದ ಕೆಳಗೆ ನಿಂತು ಬಸ್ಸಿಗೆ ಕಾಯಬೇಕು.

ಪಕ್ಕದವನ ಕೈಯಿಂದ ಒಂದು ನೋಟ್'ಬುಕ್ ಕಸಿದುಕೊಂಡು, ಅರ್ಧ ದುಡ್ಡುಕೊಟ್ಟು ವಿನಾಯಕ ಬಸ್ಸಿನಲ್ಲಿ ನೇತಾಡಿಕೊಂಡು ಕಾಲೇಜಿಗೆ ಹೋಗಬೇಕು.

ಆಲ್ಪಾಕ್ಕೆ ಹೋಗಿ ಮುಖವೂ ಕಾಣದಷ್ಟು ಹೊಗೆಯೊಳಗೆ ಕುಳಿತು ಉದ್ದ ಗ್ಲಾಸಿನಲ್ಲಿ ಚಹಾಕುಡಿಯಬೇಕು.

ಅರುಣನ ಜೊತೆ ಭಾರತಿ ಹೋಟೆಲ್'ನಲ್ಲಿ ಸಿಗರೇಟ್ ಕೊಂಡು ಕಾಲುದಾರಿಯಲ್ಲಿ ಹೆದ್ದಾರಿಯವರೆಗೂ ಹಸಿರುಗದ್ದೆಯ ನಡುವೆ ನಡೆಯಬೇಕು.

ಮೂಲೆ ಹೋಟೆಲ್ಲಿಗೆ ಹೋಗಿ(ಭಟ್ಟರು ಹೋಟೇಲು ಮುಚ್ಚಿ ಹಾವೇರಿ ಸೇರಿದ್ದಾರೆಂದು ತಿಳಿದಿದ್ದರೂ) ಭಟ್ಟರ ಸುದ್ದಿ ಕೇಳಿಬರಬೇಕು.

ಆಶಿರ್ವಾದಕ್ಕೆ ಹೋಗಿ ಕಾಶಿಯ ಪರಿಚಿತ ಮುಗುಳ್ನಗೆಯ ಸ್ವಾಗತಕ್ಕೆ ಅಷ್ಟೇ ಪರಿಚಿತ ನಗುವಿನ ಪ್ರತಿಕ್ರಿಯೆಕೊಡಬೇಕು. ಬೈಟು ಮೂಸಂಬಿ ಕುಡಿದು ಸಿಗರೇಟನ್ನು ಪಕ್ಕದ ಇಂಟರ್ನೆಟ್ ಸೆಂಟರಿನ ಕೊನೆಯ ಕಂಬಕ್ಕೆ ಹಿಸುಕಿ ನಂಚುತ್ತಲೇ, ಮತ್ತೊಂದು ಕೈಯಲ್ಲಿ ಚಿಲ್ಲೆರೆ ಎಣಿಸಿ ಪ್ಯಾಂಟಿನ ಕಿಸೆಗಿಳಿಸಬೇಕು.

ಝೆರಾಕ್ಸ್ ಅಂಗಡಿಯ ಶಿವುನ್ನ ಮಾತಾಡಿಸಬೇಕು. ಅವನು ಕೇಳುವ ನನ್ನ ಎಲ್ಲಾ ಗೆಳೆಯರ ಸುದ್ದಿಯನ್ನು ಅವನಿಗೆ ಹೇಳಬೇಕು. ಕೆಂಪು ಪ್ಲಾಸ್ಟಿಕ್ ಸ್ಟೂಲಿನ ಮೇಲೆ ಕುಳಿತುಕೊಂಡು, ಬೇಡವೆಂದರೂ ಅವನು ತರಿಸುವ ಚಹಾ ಹೀರುತ್ತಾ ಅವನ ಬ್ಯುಸಿನೆಸ್ ಬಗ್ಗೆ ಕೇಳಬೇಕು.

ಶ್ರೀಪತಿಯ ಕಟ್ಟೆಯಲ್ಲಿ ಕುಳಿತು ಹೇಮಾವತಿಯ ಕಡೆಯಿಂದ ಕಾಲೇಜಿಗೆ ಬರುವ ಹುಡುಗಿಯರ ನೋಡಿ ಕಣ್ಣು ತಂಪುಮಾಡಿಕೊಳ್ಳಬೇಕು.

೧೦ ಗಂಟೆಯ ಬ್ರೇಕ್'ನ ಹೊತ್ತಿಗೆ ಕಾಲೇಜ್ ಕ್ಯಾಂಟೀನಿಗೆ ಹೋಗಿ ನೋಡಿಬರಬೇಕು!

ಪುರುಸೊತ್ತಾದರೆ ಡಿಪಾರ್ಟ್ಮೆಂಟಿಗೆ ಹೋಗಿ ಹೆಚ್ಚೋಡಿ ಅಥವಾ ಯಾರು ಇರುತ್ತಾರೋ ಅವರನ್ನ ಕಂಡು ಮಾತನಾಡಿಕೊಂಡು ಬರಬೇಕು.

ಶಶಿಯ ಜೊತೆ ಡೆಂಟಲ್ ಕಾಲೇಜ್ ಕಡೆ ಸಂಜೆ ಹೊತ್ತೊಂದು ವಾಕ್ ಹೋಗಬೇಕು. ಅವನು Cಯಲ್ಲಿ ಬರೆದ ಹೊಸಗೇಮಿನ ಸುದ್ದಿ ಕೇಳಬೇಕು. ಅವನು ಮಾತು ಮಾತಿಗೆ "ಬಾಬ.. ಹೀಗೂ ಮಾಡ್ಬಹುದಲ್ಲ?" ಎಂದು ಕೇಳಿದಾಗ ಅವನಿಗೆ ನನಗೆ ತಿಳಿದದ್ದನ್ನೆಲ್ಲಾ ವಿವರಿಸಬೇಕು. ಆಮೇಲೆ ಅವನು ಅದ್ಯಾವುದೋ ಹಾಸ್ಟೆಲ್'ಗೆ ಹೋಗಿ ಹುಡುಗಿಯರ ಜೊತೆ ಮಾತನಾಡಿಕೊಂಡು ಬರುವವರೆಗೆ ಲವ್ ಫುಡ್ಡಲ್ಲಿ ಮತ್ತೇನಾದರೂ ಮಾಡಬೇಕು.

ಸ್ಕೂಟರಿಗೆ ೨೦ ರೂಪಾಯಿ ಪೆಟ್ರೋಲು ಹಾಕಿಸಿಕೊಂಡು ಗೋಲ್ಡನ್ ಪಂಜಾಬಿ ಡಾಭಾಕ್ಕೆ ಹೋಗಿ ಊಟ ಮಾಡಬೇಕು.

ರಾತ್ರಿ ರಸವಂತಿ ಬಾಗಿಲು ಹಾಕುವುದರೊಳಗೆ ಅಲ್ಲಿಗೆ ಹೋಗಿ ಅವಲಕ್ಕಿ ತಿಂದು ಜ್ಯೂಸು ಕುಡಿಯಬೇಕು.

BC ಹಾಸ್ಟೆಲ್'ಗೆ ತಾಗಿಕೊಂಡಿರುವ, ಹೆಸರು ನೆನಪಿರದ ಹೋಟೆಲ್'ಗೆ ಹೋಗಿ ಕೋಲ್ಡ್ ಕಾಫಿ ಕುಡಿಯಬೇಕು.

ಸೋಮಾರಿ ಅಮಿತ್'ನನ್ನು ಎಬ್ಬಿಸಿ, ಚರ್ಚ್ ಸ್ಟೀಟಿನಲ್ಲಿ ರಾತ್ರಿ ಎಂಟರ ಹೊತ್ತಿಗೆ ರಾಂ & ಕೋ ಸರ್ಕಲ್ ವರೆಗೂ ನಡೆಯಬೇಕು.

ಶನಿವಾರ ಸಂಜೆ ಆಂಜನೆಯ ದೇವಸ್ಥಾನಕ್ಕೆ ಹೋಗಿ, ಕಾಲ್ಮೇಲೆ ಕಾಲು ಹಾಕಿ ಕಲ್ಲು ಬೆಂಚಿನಮೇಲೆ ಕುಳಿತು ಸಂಜೆಯ ತಂಪನ್ನು ಸವಿಯಬೇಕು.

ಆಹಾರ್ ೨೦೦೦ ಗೆ ಹೋಗೆ "ಅಮೇರಿಕನ್ ತಿಕ್ ಶೇಕ್" ಕುಡಿದು ೫ರೂ ಮಸಾಲೆದೋಸೆ ತಿನ್ನಬೇಕು.

ಇಮ್ಮುವಿನೊಡನೆ ನಡುರಾತ್ರಿಯವರೆಗೂ ಕುಳಿತು ಚರ್ಚಿಸಬೇಕು.

ಹಲ್ಲಿ, ಇಮ್ಮು, ಸೈಂಟಿ, ಸೀಎಮ್ ಎಲ್ಲರನ್ನೂ ಸೇರಿಸಿ ಇಡೀರಾತ್ರಿ ಮೈನರ್'ಮೇಜರ್ ಆಡಬೇಕು.

ಬೆಳೆಯುತ್ತಲೇ ಹೋಗುತ್ತದೆ ಪಟ್ಟಿ.. ಒಂದೊಂದೇ ಎದ್ದು ಕಾಣಿಸಿಕೊಳ್ಳುತ್ತವೆ ನೆನಪುಗಳು; ಕನ್ನಡಿಯ ಮುಂದೆ ನಿಂತು ತಲೆಬಾಚುವಾಗ ಅನಿರೀಕ್ಷಿತವಾಗಿ ಕಾಣಿಸಿಕೊಳ್ಳುವ ಬಿಳಿ ಕೂದಲಿನಂತೆ...