Thursday, July 24, 2008

ಎಕ್ಸ್’ಕ್ಯೂಸ್ ಮಿ...

ಕೆಲವು ವಾರಗಳ ಹಿಂದಿನ ಒಂದು ರಾತ್ರಿ. ಸುಮಾರು ಹತ್ತೂವರೆಯಾಗಿದ್ದಿರಬಹುದು. ಮನೆಯ ಬಳಿಯಿರುವ ಶಾಂತಿಸಾಗರದಲ್ಲಿ ಶಾಂತ ಮನಸ್ಸಿನಿಂದ ನನ್ನ ಎರಡನೆಯ ಸುತ್ತಿನ ಮೊದಲನೆ ಮಸಾಲೆ ದೋಸೆಯನ್ನು ಸವಿಯುತ್ತಿದ್ದೆ. ಎಂದಿನಂತೆ ಹೋಟೆಲ್ಲಿನಲ್ಲಿ ಸಾಕಷ್ಟು ಜನರಿದ್ದರು. ಹತ್ತಿರದಲ್ಲೇ ಯಾರೋ "ಅಂಕಲ್" ಎಂದು ಕರೆದಂತಾಯಿತು. ಮೊದಲ ಬಾರಿ ಅಲಕ್ಷಿಸಿದೆ. ಆದರೆ ಎರಡನೇ ಬಾರಿ ಮತ್ತೆ "ಅಂಕಲ್" ಎಂದು ಕರೆದದ್ದು, ಅದೂ ಈ ಬಾರಿ ಇನ್ನೂ ಹತ್ತಿರದಿಂದಲೇ ಧ್ವನಿ ಕೇಳಿದಂತಾಗಿ, ತಿರುಗಿ ನೋಡಿದೆ. ನನ್ನ ಬೆನ್ನಿನ ಬದಿಯಲ್ಲಿ ಒಬ್ಬ ಹುಡುಗ ನಿಂತಿದ್ದ. ಅವನ ಮುಖ ನೋಡಿದಾಗ ಅವನು ಕರೆದಿದ್ದು ನನ್ನನ್ನೇ ಎಂದು ಖಾತ್ರಿಯಾಯಿತು. ಸುಮಾರು ೧೨-೧೩ ವರ್ಷದವನಿರಬಹುದು. ಉದ್ದಕ್ಕೆ, ಬಡಿ ಬಡೀ ಇದ್ದ. ಅವನು ಧರಿಸಿದ್ದ ತಿಳಿ ನೀಲಿಗೆರೆಯ ಬಿಳಿ ಅಂಗಿ ಮತ್ತು ಕಡು ನೀಲಿ ಬಣ್ಣದ ಚಡ್ಡಿಯನ್ನು ನೋಡಿದರೆ, ಅದು ಯಾವುದೇ ಶಾಲೆಯ ಸಮವಸ್ತ್ರವೆಂಬುದು ಸ್ಪಷ್ಟವಾಗುವಂತಿತ್ತು.

"ಏನು" ಎನ್ನುವಂತೆ ಅವನ ಮುಖನೋಡಿದೆ.
"ಸರ್.. Excuse me ಸರ್.. " ಎಂದ..
ಈ ಬಾರಿ ಬಾಯಿಬಿಟ್ಟು "ಏನು" ಎಂದು ಕೇಳಿದೆ.

ಧೈರ್ಯ ಬಂದವನಂತೆ ಸ್ವಲ್ಪ ಚುರುಕಾಗಿ ನನ್ನ ಪಕ್ಕ ಬಂದು ನನಗೆ ಅವನ ಮುಖ ಕಾಣುವಂತೆ ನಿಂತುಕೊಂಡ. ಕೈಯಲ್ಲಿ ೧೦ರೂ. ನ ಮೂರ್ನಾಲ್ಕು ನೋಟು ಹಿಡಿದುಕೊಂಡಿದ್ದ ಆ ಹುಡುಗ. ಇಲ್ಲಿ ಬರೆದರೆ ನಾಲ್ಕೈದು ಸಾಲಾಗಬಹುದಾದಂತಹ ಒಂದು ಉsssದ್ದ ವಾಕ್ಯವನ್ನು ಕೈಕಟ್ಟಿಕೊಂಡು, ಹೇಳಿದ. ಒಮ್ಮೆ ಹೇಳಿದ್ದನ್ನೆ ಮತ್ತೊಮ್ಮೆ ಇಂಗ್ಲೀಷಿನಲ್ಲಿ ಹೇಳಿದ.

ಸಾರಾಂಶ ಏನಪಾ ಅಂತಂದ್ರೆ: ಅವನಿಗೆ ಶಾಲೆಗೆ ಹೋಗಲು ದುಡ್ಡಿಲ್ಲಿದ್ದರಿಂದ ಸಹಾಯ ಕೇಳುತ್ತಿದ್ದ..
ಸರಿ..
"ಮನೆ ಎಲ್ಲಿ?" ಎಂದೆ.
"ಇಲ್ಲೇ ಸಾರ್, ಗಾಯತ್ರಿ ನಗರ" ಎಂದ.

"ಊಟ ಆಯ್ತಾ" ಎಂದರೆ... ಮುಖದಲ್ಲಿ ವಿಚಿತ್ರ ಬಾವನೆ ಮೂಡಿಸಿ ತಲೆ ಕೆರೆದುಕೊಳ್ಳುತ್ತಾ.. "ಸಾರ್, ಸ್ಕೂಲ್ ಫೀಸು" ಎಂದು ರಾಗ ಎಳೆದ.

"ಗಾಯತ್ರಿ ನಗರ ತಾನೆ? ನಾನೆ ಬಿಡ್ತೀನಿ ಮನೆಗೆ ಇಲ್ಲೇ ಇರು, ಹೋಗೋಣ" ಎಂದು ಅವನ ಮುಖವನ್ನೇ ಗಮನಿಸಿದೆ. ಈ ಮಾತಿನಿಂದ ಅವನು ಆಶ್ಚರ್ಯಗೊಂಡಿದ್ದು ಮಾತ್ರವಲ್ಲ ಸ್ವಲ್ಪ ಹೆದರಿಕೊಂಡಂತೆ ಕಂಡುಬಂದ.
ಒಂದರ್ಧ ನಿಮಿಷ ಸುಮ್ಮನಿದ್ದವನು, ನಂತರ ಹೇಳಿದ..

"ಸಾರ್, ಮನೆ ಇರೋದು ಇಲ್ಲಲ್ಲ; ಮತ್ತೀಕೆರೆಲ್ಲಿ. ಇಲ್ಲಿ ಅಜ್ಜಿ ಮನೆಗೆ ಬಂದಿದ್ದೆ ಅಷ್ಟೆ."

ನನ್ನ ಮನಸ್ಸಿನಲ್ಲಿ ಏನೋ ತಿಳಿಯದ ಅನುಮಾನ ಮೂಡುತ್ತಿತ್ತು. ಹಾಗೆಂದೇ ಹೇಳಿದೆ
"ನನ್ನ ರೂಂಮೇಟು ಅಲ್ಲಿಗೇ ಹೋಗ್ತಾ ಇದಾನೆ. ಇಷ್ಟೊತ್ನಲ್ಲಿ ಒಬ್ನೇ ಹೇಗ್ ಹೋಗ್ತೀಯ, ಅವ್ನು ಬಿಡ್ತಾನೆ"

"ಬ್ಯಾಡ ಸಾರ್, ಸುಮ್ನೆ ಯಾಕ್ ತೊಂದ್ರೆ" ಎಂದು ನಕ್ಕವನೇ ಅತ್ತ ತಿರುಗಿ ಹೊರಟುನಿಂತ..
ಅವನು ಕೇಳಿದ ದುಡ್ಡಿಗೆ ನಾನೇನೂ ಉತ್ತರವನ್ನೇ ಹೇಳಿರಲಿಲ್ಲ.
"ಇರು ಕೈತೊಳ್ಕೊಂಡ್ ಬರ್ತೀನಿ" ಎನ್ನುವಷ್ಟರಲ್ಲೆ ಅವನು ಫುಟ್ಪಾತಿನಲ್ಲಿ ಜೋರು ಜೋರು ಹೆಜ್ಜೆಯಿಡುತ್ತಾ ಹೋಗುತ್ತಿರುವುದು ಕಂಡಿತು.

ಅವಸರದಲ್ಲಿ ಕೈತೊಳೆದು ಅವನು ಹೋದ ದಿಕ್ಕಿನಲ್ಲೇ ಸರಸರನೆ ನಡೆದು ಎಲ್ಲಾದರು ಕಾಣುತ್ತಾನೆನೊ ಎಂದು ನೋಡಿದೆ. ಎದುರಿನ ಬಸ್ ಸ್ಟ್ಯಾಂಡಿನಲ್ಲೂ ಇರಲಿಲ್ಲ.. ಮತ್ತೀಕೆರೆಗೆ ನಡೆದುಕೊಂಡು ಹೊರಟಿರುವ ಸಾದ್ಯತೆಯೂ ಕಡಿಮೆಯೆ.

ಏನೋ, ತಲೆಯಲ್ಲೆಲ್ಲಾ ಗೊಂದಲವೇ ತುಂಬಿದಂತಾಗಿ, ಒಮ್ಮೆ ಜೋರಾಗಿ ತಲೆಕೊಡವಿ ಮರಳಿ ಹೋಟೆಲ್ ಬಳಿಹೋಗಿ ಒಂದು ಬಿಳಿ ಎಲೆ ಸ್ವೀಟ್ ಹಾಕಿ ಮೋಡದ ಮರೆಯ ಚಂದಿರನನ್ನೇ ನೋಡುತ್ತಾ ಮನೆಕಡೆ ನಡೆದೆ..

Monday, July 21, 2008

ಕಾಫಿ ಸ್ಪೆಶಲ್!



ವಿವರಣೆ ಬೇಕೆ?

Thursday, July 17, 2008

ಹರಿತಾ?

ಜುಲೈ ತಿಂಗಳ ಮೊದಲಿನಿಂದ ಆಫೀಸಿಗೆ ಬಸ್ಸಿನಲ್ಲಿ ಬರುತ್ತಿದ್ದೇನೆ. ಪ್ರತಿದಿನದ ಪ್ರಯಾಣದಲ್ಲೂ ಹೊಸತೆಂದು ತೋರುವ ಏನಾದುರೊಂದು ಇದ್ದೇ ಇರುತ್ತದೆ.

ಬಸ್ಸಿನ ಪ್ರಯಾಣದ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ. ಈಗ, ಸದ್ಯಕ್ಕೆ ಕಳೆದ ಶುಕ್ರವಾರದ ಒಂದು ಸಣ್ಣ ತುಣುಕು.
ತುಂಬಾ ದಿನದ ನಂತರ ಆಫೀಸಿಗೆ ಜುಬ್ಬಾ ಹಾಕಿಕೊಂಡು ಹೊರಟಿದ್ದೆ. ಇಳಿಯಬೇಕೆಂದು ಏಳುತ್ತಿರುವಾಗ ಜುಬ್ಬಾ ಸ್ವಲ್ಪ ಸೀಟಿಗೆ ಹಿಡಿದೆಂತೆನಿಸಿ ಗಾಬರಿ ಬೆರೆತ ಅನುಮಾನವುಂಟಾಯಿತು. ’ಹರಿತಾ?’ ಎಂದು ಬಗ್ಗಿ ನೋಡಿದೆ. ಕಂಡಿದ್ದು..


ತಟ್ಟನೆ ಒಂದು ಫೋಟೊ ಕ್ಲಿಕ್ಕಿಸಿಕೊಂಡು, ಸುಮ್ಮನೆ ಇಳಿದು ನಡೆದೆ.