Monday, February 09, 2009

ಮುಂಚೆ ಮಾಡಿಕೊ ಧರ್ಮವ

ಗೋವಿಂದಾ ಹರಿ ಗೋವಿಂದಾ ಹರಿ ಗೋವಿಂದಾ ನಾರಾಯಣ
ಗೋವರ್ಧನ ಗಿರಿಯನೆತ್ತಿದ ಸ್ವಾಮಿ ನಮ್ಮನು ರಕ್ಷಿಸೊ ||ಪ||

ಮಂಚ ಬಾರದು ಮಡದಿ ಬಾರಳು ಕಂಚು ಕನ್ನಡಿ ಬಾರದು
ಸಂಚಿ ತುಂಬಿದ ಹಣವು ಬಾರದು ಮುಂಚೆ ಮಾಡಿಕೊ ಧರ್ಮವ ||೧||

ಅಣ್ಣ ಬಾರೆಂದು ತಮ್ಮ ಬಾರೆಂದು ಬಣ್ಣ ಭಾಷೆಲಿ ಕರೆವರು
ಎಣ್ಣೆ ತುಪ್ಪವ ಕಾಸಿ ಬಾಯೊಳು ಸಣ್ಣ ಧಾರೆಲಿ ಬಿಡುವರು ||೨||

ಮಕ್ಕಳುಂಟೆಂದು ಮರಿಗಳುಂಟೆಂದು ನೆಚ್ಚಬೇಡೆಲೆ ಜೀವವೆ
ಯಮನ ಧೂತರು ಬಂದು ಕರೆವಾಗ ಮಕ್ಕಳಿದ್ದರು ಬಾರರು ||೩||

ನೆಂಟರುಂಟೆಂದು ಇಷ್ಟರುಂಟೆಂದು ಹಿಗ್ಗಬೇಡೆಲೆ ಜೀವವೆ
ಕಳ್ಳತನದಲಿ ಯಮನರೊಯ್ವಾಗ ಯಾರು ಬಿಡಿಸುವರೆನ್ನನು? ||೪||

ಹಾಸು ದರ್ಭೆಯ ಸೂಸು ಶೇಡಿಯ ಶ್ವಾಸ ಮೇಲ್ಮುಖವಾಗಿದೆ
ಶೇಷಗಿರಿ ತಿಮ್ಮಪ್ಪನಾಯ್ಕನ ಬೇಸರಿಲ್ಲದೆ ಭಜಿಸಿರೊ ||೫||

-ಪುರಂದರ ದಾಸರು

Update: (13/02/2009)
ವಿ.ಸೂ: ಇದನ್ನು ನಾನು ಯಾವುದೇ ಮುದ್ರಿತ ಹೊತ್ತಿಗೆಯಿಂದ ತಂದಿದ್ದಲ್ಲ.
ಅವರಿವರ ಬಾಯಲ್ಲಿ ಕೇಳಿದ್ದನ್ನು, ನನಗೆ ನೆನಪಿದ್ದ ಹಾಗೆ ಬರೆದಿದ್ದೇನೆ. ಹಾಗಾಗಿ
ಇದು ಪುರಂದರ ದಾಸರ ರಚನೆಯೇ ಎಂಬ ಬಗ್ಗೆ ಅನುಮಾನವಿದೆ.
ಅನುಮಾನಕ್ಕೆ ಮುಖ್ಯ ಕಾರಣವೆಂದರೆ ದಾಸರ ರಚನೆಯಲ್ಲಿ ಕಾಣಬರುವ
’ಪುರಂದರ ವಿಠಲ’ ಇಲ್ಲೆಲ್ಲೂ ಇಲ್ಲ!
ಹುಡುಕಿದಾಗ ನನಗೆ ಇದೇ ರೀತಿಯ ಇನ್ನೊಂದು ರಚನೆ ಇಲ್ಲಿ ಸಿಕ್ಕಿತು.
ಅದರಲ್ಲಿರುವ ರಚನೆಗೂ ಹಾಗು ನಾನು ಬರೆದದ್ದಕ್ಕು ಬಹಳ ವ್ಯತ್ಯಾಸಗಳಿವೆ.

ನನ್ನ ಸದ್ಯದ ಪರಿಸ್ಥಿತಿಯಲ್ಲಿ ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುವುದು
ಸಾಧ್ಯವಿಲ್ಲವಾದ್ದರಿಂದ ಇಲ್ಲಿಗೇ ನಿಲ್ಲಿಸುತ್ತಿದ್ದೇನೆ.
ನಿಮ್ಮ ಬಳಿ ಈ ಬಗ್ಗೆ ಹೆಚ್ಚಿನ ಮಾಹಿತಿಯಿದ್ದರೆ ಹಂಚಿಕೊಳ್ಳಬಹುದು.

6 comments:

ಸಿಮೆಂಟು ಮರಳಿನ ಮಧ್ಯೆ said...

ಎಲ್ಲ ಆಧ್ಯಾತ್ಮದ ಸಾರವನ್ನು ..
ಈ ಭಜನೆಯಲ್ಲಿ ಧಾರೆ ಎರೆದಿದ್ದಾರೆ..

ಹಣ,ಅಧಿಕಾರ, ಮೋಹವದಲ್ಲಿ ಏನಿಲ್ಲ..
ಮುಕ್ತಿಗೆ.. ಭಕ್ತಿಯೇ ಸಾಧನ..

ಪುರಂಧರ ದಾಸರ ಈ ಚಂದದ ಹಾಡನ್ನು ನೆನಪಿಸಿದ ..
ನಿಮಗೆ ಧನ್ಯವಾದಗಳು...

ಚಿತ್ರಾ said...

ಬಹು ಸುಂದರವಾದ ಭಜನೆ.

ಪ್ರತಿಮುಂಜಾನೆ, ಅಜ್ಜಿ, ಹಾಲುಕರೆಯಲು ಹೋಗುವಾಗ ಹಾಡಿಕೊಳ್ಳುತ್ತಿದ್ದ ಈ ಹಾಡನ್ನು ಇಲ್ಲಿ ಕಂಡು ಬಾಲ್ಯದ ನೆನಪಲ್ಲಿ ಸಂಭ್ರಮಿಸಿದೆ !
ಧನ್ಯವಾದಗಳು.

sunaath said...

ಈ ಹಾಡಿನ ಅಂಕಿತ ಬೇರೆ ಇದೆಯಲ್ಲ?

Alpazna said...

@ಸಿಮೆಂಟು,
ನಾವು ಮಾಡಿದ ಸತ್ಕಾರ್ಯಗಳು ಮಾತ್ರ ನಮ್ಮೊಡನೆ ಇರುತ್ತವೆ ಎಂಬುದೇ ಸಾರಾಂಶ.
ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

@ಚಿತ್ರಾ,
ಹೌದು. ನಾನು ಇದನ್ನು ಬಹಳ ವರ್ಷಗಳಿಂದ ಕೇಳುತ್ತಿದ್ದೇನೆ.

@sunaath,
ಆ ಬಗ್ಗೆ ನಾನೂ ಯೋಚಿಸಿದ್ದೇನೆ. ಆ ವಿಷಯದ ಬಗ್ಗೆ ನಾಲ್ಕು ಸಾಲುಗಳನ್ನು ಬ್ಲಾಗಿಗೇ ಸೇರಿಸುತ್ತೇನೆ.
ಧನ್ಯವಾದಗಳು.

Harish - ಹರೀಶ said...

ಗೂಗಲ್ ಟಾಕ್ ನಲ್ಲಿ ಕೇಳಿದ ಪ್ರಶ್ನೆಗೆ ಇಲ್ಲಿ Update ಹಾಕಿ ಉತ್ತರ ಕೊಟ್ಟಿದ್ಯಾ? ಎಡವಟ್ಟಣ್ಣಯ್ಯ! ಇದೂ ಒಂಥರಾ ಸರಿನೆ..

ನಿನ್ನ "ಪರಿಸ್ಥಿತಿ" ಬೇಗ ಸುಧಾರಿಸಲಿ :-)

Alpazna said...

@ಹರೀಶ,
ಅಲ್ಲೇ ಉತ್ರ ಹೇಳಿದ್ರೆ ನಿಂಗ್ ಮಾತ್ರ ಆಗ್ತಿತ್ತು..
ಇಲ್ಲೇ ಹಾಕ್ಬುಟ್ರೆ ಎಲ್ಲರಿಗು ಬಂತು. ಏನಂಬೆ?

btw, ಹಾರೈಕೆಗೆ ಧನ್ಯವಾದ:)