ಮೊನ್ನೆ ೧೪/೧೫ ನಡಹಳ್ಳಿಗೆ ಹೋಗಿದ್ದೆ. ಹಿಂದೆ ಮುಂದೆ ರಜವಿಲ್ಲದಿದ್ದರೆ ಶುಕ್ರವಾರ ರಾತ್ರಿ ಬೆಂಗಳೂರಿಂದ ಹೊರಟು ಶನಿವಾರ ತಲುಪಿ ಮತ್ತೆ ಅಲ್ಲಿಂದ ಭಾನುವಾರ ರಾತ್ರಿ ಮರಳಿ ಹೊರಡುವುದು ಹೊಸತೇನಲ್ಲ. ನಮ್ಮೂರಿಗೆ ಹತ್ತಿರದ ಪಟ್ಟಣ ಸೊರಬ, ನಮ್ಮ ತಾಲ್ಲೂಕಿನ ಕೇಂದ್ರ. ಅಲ್ಲಿಂದಲೇ ಬೆಂಗಳೂರಿಗೆ direct ಬಸ್ ಇದೆ. ಮೊದಲೆಲ್ಲ ಜಾಸ್ತಿ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯೇ ಇರಲಿಲ್ಲ. ಇದ್ದಿದ್ದು ಒಂದು ಸಿರ್ಸಿ-ಬೆಂಗಳೂರು (semi luxury) ಮತ್ತೊಂದು ಹಾನ್ಗಲ್-ಬೆಂಗಳೂರ್ ಬಸ್ಸು(super deluxe!).
ಆಮೇಲೆ ಸಿರ್ಸಿ ಲೈನಿಗೆ ದೊಡ್ ಬಸ್ ಬಂತು. ಆ ಟೈಮಿಗೆ ಸೊರಬದಿಂದಲೇ ಹೊರಡೊ ಒಂದು ಪ್ರೈವೇಟ್ ಬಸ್ ಶುರುವಾತು. ವರ್ಷ ಎರಡೊರ್ಷಕ್ಕೆ ಅದು ನಿಂತು ಹೋಯಿತು. ನಂತರದ್ದು ಸೋನಿ ಬಸ್ಸು. ಬಹಳ ಒಳ್ಳೇ ಬಸ್ಸು. ಲೋಕಲ್ ಸೀಟ್ ಸ್ವಲ್ಪ ಜಾಸ್ತಿ. ನಾನು ದಾವಣಗೆರೆಯಲ್ಲಿ ಓದುತ್ತಿದ್ದಾಗ ಸೋನಿ ಬಸ್ಸಿನಲ್ಲಿ ತುಂಬಾ ಪ್ರಯಾಣಿಸಿದ್ದೇನೆ.
ಸೊರಬದಿಂದಲೇ ಹೊರಡುವ ರಾಜಹಂಸ ಶುರುವಾದ ಮೇಲೂ ಸೋನಿ ಬಸ್ಸಿಗೆ ಒಳ್ಳೇ ವ್ಯಾಪಾರ ಇತ್ತು. ಅದೇನಾಯಿತೊ ಗೊತ್ತಿಲ್ಲ, ಈಗ ಸುಮಾರು ಎರಡು ವರ್ಷದ ಕೆಳಗೆ ಸೋನಿ ಮಾಯವಾಯಿತು.
ಸೋನಿಯ ಜಾಗದಲ್ಲಿ ಇನ್ನೊಂದು ಬಂತು, ಬಾಲಾಜಿ ಅಂತ. ಅದೇ ನಂತರ ಸಿದ್ಧಗಂಗ ಎಂದಾಯಿತೊ ಏನೊ ಗೊತ್ತಿಲ್ಲ. ಅಂತು ಸ್ವಲ್ಪ ದಿನ ಸಿದ್ಧಗಂಗ ಅಂತ ಒಂದು ಪ್ರೈವೇಟ್ ಬಸ್ಸು ಸೊರಬ-ಬೆಂಗಳೂರು-ಸೊರಬ ಹೊಡೀತಿತ್ತು.
ಸುಮಾರು ಒಂದು ವರ್ಷವಾಗಿರಬೇಕು, ಮಹಾದೇವ ಅಂತ, ಹೊಸಾದು. ಇವರದ್ದು ಈಗ ಎರಡು ಬಸ್ಸುಗಳಿವೆ. ಒಂದು ೨+೨ ಮತ್ತೊಂದು ೨+೧. ನನ್ನ ಸದ್ಯದ default ಬಸ್ಸು ಕೂಡ ಇದೆ. ಒಂದು ಫೋನ್ ಮಾಡಿ ಬುಕ್ ಮಾಡಿದರಾಯಿತು. ಅರಾಮಾಗಿ ನಿದ್ರೆ ಮಾಡಿಕೊಂಡು ಹೋಗಬಹುದು.
ಮೊನ್ನೆ ಹೋಗುವಾಗ ಕೂಡ ಶುಕ್ರವಾರ ರಾತ್ರಿ ಮಹದೇವ ಬಸ್ಸಿಗೇ ಹೋದೆ. ಮರಳಿ ಬರಲು ಟಿಕೆಟ್ಟಿಗೆಂದು ಇನ್ನೂ ಹೇಳಿರಲಿಲ್ಲ. ಇನ್ನೇನು ಫೋನ್ ಮಾಡಬೇಕೆಂದುಕೊಳ್ಳುತ್ತಿರುವಾಗ ಅಪ್ಪ ಹೇಳಿದ. "ತಡಿ, ಮಹದೇವ ಬ್ಯಾಡ ಈ ಸರಿ. ಹೊಸ ಬಸ್ ಬಿಟ್ಟಿದ್ದ. ಸ್ಲೀಪಿಂಗ್ ಕೋಚ್ ಬೇರೆ ಇದ್ದಡ ನೋಡ್ಲಕ್ಕಡ".
ಸರಿ ಎಂದು ಹೊಸ ಸ್ಲೀಪರ್ ಬಸ್ಸಿನಲ್ಲೇ ಟಿಕೇಟ್ ಬುಕ್ ಮಾಡಿಸಿಯಾಯಿತು. ಅದೇ ಪರ್ವತ್ ಟ್ರಾವೆಲ್ಸ್!! ಸರಿ, ಬಸ್ಸು ಹೊರಡುವುದು ರಾತ್ರಿ ೯:೧೫ಕ್ಕೆ. ಸಂಜೆ ಬಸ್ಸಿನ ಏಜೆಂಟು ಮನೆಗೇ ಫೋನ್ ಮಾಡಿ ಬುಕ್ಕಿಂಗ್ ಖಾತ್ರಿ ಮಾಡಿಕೊಂಡಿದ್ದ. ಅದರಿಂದಲೇ ನಾನು ಹೊಸ ಬಸ್ಸಿನ ಗ್ರಾಹಕ ಸೇವೆಯನ್ನು ಮೆಚ್ಚಿಕೊಂಡುಬಿಟ್ಟಿದ್ದೆ! (ಗ್ರಾಹಕನಾಗುವ ಮೊದಲೆ).
ನಾನು ಸಂಜೆ ಗಿಣ್ಣಾಲು ಕುಡಿದು, ಲೈಟಾಗಿ ೨ ಚಪಾತಿ ತಿಂದು ಮನೆಯಿಂದ ಹೊರಟೆ. ಎಂದಿನಂತೆ ಅಪ್ಪನ ಜೊತೆ ಕಾರಿನಲ್ಲಿ ಸೊರಬಕ್ಕೆ ಬಂದೆ.
ಪೈ ಅಂಗಡಿ ಎದುರಿಗೇ ನಿಂತಿದ್ದ ಪರ್ವತ್ ಬಸ್ಸು ಸ್ವಲ್ಪ ಹೆಚ್ಚಿಗೆ ಎತ್ತರವಿದ್ದಂತೆ ಕಾಣುತ್ತಿತ್ತು. ಭಾನುವಾರ ರಾತ್ರಿ ಎಲ್ಲ ಕಡೆಯಿಂದ ಬೆಂಗಳೂರಿಗೆ ಹೊರಡುವವರು ಜಾಸ್ತಿ. ಅದಕ್ಕೆ ಸೊರಬವೇನು ಹೊರತಾಗಿಲ್ಲ. ಹಾಗಾಗಿಯೇ ಬೇಗ ಮಲಗಿಬಿಡುವ ಸೊರಬ ಪೇಟೆಯಲ್ಲಿ ಹತ್ತಿಪ್ಪತ್ತು ತಲೆಗಳನ್ನು ನೋಡಬಹುದಿತ್ತು. ಬಸ್ಸಿನ ಬಾಗಿಲ ಬಳಿ ಹೋಗಿ ನಿಂತವನೆ ಏಜೆಂಟಿಗಾಗಿ ಹುಡುಕತೊಡಗಿದೆ. ಅವನು ಅಲ್ಲೇ ಕೆಳಗಡೆ ಯಾರಿಗೋ ಟಿಕೆಟ್ ಹರಿಯುತ್ತಿದ್ದ. ನಂಗಿನ್ನು ಸೀಟ್ ನಂಬರ್ ಕೊಟ್ಟಿರದ್ದರಿಂದ ಅವನಿಗೆ ಕಾಯಬೇಕಾಯಿತು. ಕೈಯ್ಯಲ್ಲೊಂದು ಕ್ಲಿಪ್ಪಾಕಿದ್ದ ರಟ್ಟು(pad) ಹಿಡಿದುಕೊಂಡು ಅವ ಬಂದ.
"ಸ್ಲೀಪಿಂಗ್ ಅಲ್ವ ನೀವು? U3 ತಗೊಳ್ಳಿ ಸಾರ್" ಎಂದವನೆ ಚಂದದೊಂದು ಟಿಕೆಟ್ಟಿನ ಮೇಲೆ ಎನೋ ಗೀಚಿ, ಹರಿದು ನನ್ನ ಕೈಗಿತ್ತ. ಪ್ರಯಾಣದ ದಿನಾಂಕ ಮತ್ತು ಸೀಟ್ ನಂಬರ್ ಮಾತ್ರ ನಾನು ಸರಿಯಾಗಿ ನೋಡಿಕೊಂಡು ನಿಧಾನವಾಗಿ ಬಸ್ ಹತ್ತಿದೆ. ಒಳ್ಳೆ ಗಂ ಅಂತ ಅಗರಬತ್ತಿ ಮತ್ತು ಮಲ್ಲಿಗೆಯ ಮಿಶ್ರ ಪರಿಮಳ. ಒಳಗಿಂದ ಗ್ಲಾಸನ್ನು ತಿಕ್ಕಿ ಒರೆಸುತ್ತಿದ್ದ ಚಾಲಕನ ಮುಗುಳ್ನಗೆಯ ಸ್ವಾಗತ. ಚಾಲಕನನ್ನು ಹಾಗೇ ದಾಟಿ ಒಳನಡೆದೆ.
ನೀಟಾಗಿ ಗುಡಿಸಿಟ್ಟ ಬಸ್ಸು. ಒಳಗೆ ಹೋಗುತ್ತಿದ್ದಂತೆ ಎಡಗಡೆ ಸಾಲಿಗೆರಡರಂತೆ ಐದಾರು ಸಾಲು ಸುಖಾಸನಗಳು. ಅದರ ಮೇಲೆ ನಿದ್ರಾಸನಗಳು/ಹಾಸಿಗೆಗಳು. ಬಲಗಡೆಯಲ್ಲಿ, ಕೆಳಗೆ ಹಾಗು ಮೇಲೆ ಎರಡೂ ಕಡೆ ಮಲಗಿ ಪ್ರಯಾಣಿಸುವ ವ್ಯವಸ್ಥೆ. ಮೇಲಿನಿಂದ ಶಿಸ್ತಾಗಿ ಜೋತುಬಿಟ್ಟಿದ್ದ ತಿಳಿಬಣ್ಣದ ಹೂವಿನ ಚಿತ್ರದ ಪರದೆಗಳು ಕೆಂಪು ಬಣ್ಣದ ಹಾಸಿಗೆಯನ್ನು ಮರೆಮಾಡುತ್ತಿದ್ದವು. ಮಧ್ಯದ ದಾರಿ ಮಾತ್ರ ಸ್ವಲ್ಪ ಸಣ್ಣದೆನಿಸಿತು.
ಎಡಗಡೆಯ ಪರದೆಯನ್ನೊಮ್ಮೆ ಸರಿಸಿ ನೋಡಿದೆ. ಏನಾಶ್ಚರ್ಯ್!! ಒಳ್ಳೆ ಅಗಲವಾದ ಹಾಸಿಗೆ. ಅಷ್ಟು ಅಗಲದ ಹಾಸಿಗೆಯನ್ನು ಬೇರಾವ ಬಸ್ಸಿನಲ್ಲು ನೋಡಿರಲಿಲ್ಲ. ಅದರ ಮೇಲೆ ಶುಭ್ರವಾದ ಕೆಂಪು ಮೇಲುಹೊದಿಕೆ. ತುದಿಯಲ್ಲೊಂದು ಕೆಂಪಂಗಿ ತೊಟ್ಟ ಪುಟ್ಟ ಬಿಳಿ ದಿಂಬು. ಇನ್ನೇನು ಬೇಕು?!
ಆದರೆ "U3" ಹುಡುಕಬೇಕಿತ್ತು. ಪ್ರಯತ್ನಪಟ್ಟೆ, ಸೋತೆ. ಏಜೆಂಟು ಅಷ್ಟೊತ್ತಿಗೆ ಬಸ್ ಹತ್ತಿ ಒಳಗೆ ಹಾಸಿಗೆ ಹತ್ತಿ ಕುಣಿಯುತ್ತಿದ್ದ ಚಿಕ್ಕ ಮಕ್ಕಳನ್ನು ಬೈದು ಕೆಳಗಿಳಿಸುತ್ತಿದ್ದ. ಸೀಟು ತೋರಿಸಿ ಎಂದೆ. ಬಂದು ಹುಡುಕಿದ, ಪಾಪ ಅವನಿಗೂ U3 ಸಿಗಲಿಲ್ಲ. "ತಾಳಿ ಸರ್, ಡ್ರೈವರ್ ಕೇಳನ ಹೊಸ ಬಸ್ಸು ಹಂಗಾಗಿ.. " ಎಂದು ಡ್ರೈವರ್ ಹತ್ರ ಹೋದ. ಡ್ರೈವರ್ ಬಂದು ಎಡಗಡೆಯ ಮೊದಲ ಹಾಸಿಗೆ ತೋರಿಸಿ ಹೋದ. ಆ ಹಾಸಿಗೆಯ ಬಳಿಯ label U6 ಅಂತ ಇತ್ತು! ನನಗೆ ಅಷ್ಟೊತ್ತಿಗಾಗಲೆ, ಇಲ್ಲೆನೊ ಎಡವಟ್ಟಾಗಿದೆ ಎಂದೆನಿಸತೊಡಗಿತ್ತು. ಅಷ್ಟರಲ್ಲಿ U6 ನ ಮಹಾನುಭಾವರು ಬಂದು ಹತ್ತಿ ಶಿಸ್ತಾಗಿ ಮಲಗಿಬಿಟ್ಟರು!
ಆಗಲೇ ನನಗೆ ಗೊತ್ತಾಗಿದ್ದು. ನಾನಂದುಕೊಂಡ ಸಾಕಷ್ಟು ಅಗಲವಾದ ಹಾಸಿಗೆ double seatಉ!! ಮತ್ತು ಈ ಮನುಷ್ಯ ಒಂದೇ ಟಿಕೆಟ್ ಬುಕ್ ಮಾಡಿದವರಿಗೆ ಖುಶಿಯಿಂದ double bedನಲ್ಲಿ ಒಂದನ್ನು ಕೊಟ್ಟು ಬಿಟ್ಟಿದ್ದ. ಅಂದರೆ, ಅವನ ಬುಕಿಂಗ್ ಪ್ರಕಾರ ಪ್ರಯಾಣಿಸಿದರೆ, ಅಪರಿಚಿತ ಪ್ರಯಾಣಿಕರ ಜೊತೆ ಹೆಚ್ಚೆಂದರೆ ಮೂರುವರೆ ನಾಲ್ಕಡಿ ಅಗಲವಿರುವ ಹಾಸಿಗೆಯಲ್ಲಿ ಮಲಗಿ ಪ್ರಯಾಣಿಸಬೇಕು.
ನನಗೆ ತುಂಬಾ ಅಸಮಾಧಾನವಾಗಿತ್ತು. ಬಸ್ಸು ಹೊರಡಬೇಕಾದ ಸಮಯ ದಾಟಿ ಆಗಲೇ ೧೦ ನಿಮಿಷವಾಗಿತ್ತು. ನನ್ನಂತೆಯೇ ಇನ್ನೊಬ್ಬರಿಗೂ ಆಗಿತ್ತು. ಅವರಾಗಲೇ ಏಜೆಂಟರ ಜೊತೆ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದರು.
ಅವರನ್ನು ಸಮಾಧಾನ ಮಾಡಲು ಏಜೆಂಟರ ಸರ್ವಪ್ರಯತ್ನ. ಸಮಸ್ಯೆ ಏನೆಂದರೆ ಇದೇ ಮೊದಲಬಾರಿಗೆ ಸ್ಲೀಪಿಂಗ್ ಬಸ್ಸೊಂದು ಅಲ್ಲಿ ಬಂದು ನಿಂತಿದೆ. ಅನನುಭವಿಯಾದ ಏಜೆಂಟನೊಬ್ಬ ಸೀಟು ಬುಕ್ಕು ಮಾಡಿದಂತೆ ಕೇಳಿದವರಿಗೆಲ್ಲ ಟಿಕೇಟು ಕೊಟ್ಟಿದ್ದಾನೆ. ಅಪರಿಚಿತರು ಸಾಯಲಿ, ಅಷ್ಟು ಸಣ್ಣ ಹಾಸಿಗೆಯಲ್ಲಿ ಗಂಡ ಹೆಂಡತಿ ಕೂಡ ಒಟ್ಟಿಗೆ ಪ್ರಯಾಣಿಸುವುದು ಕಷ್ಟ!! ಏಜೆಂಟು ಈ ಬಸ್ಸನ್ನು, ಬಸ್ಸಿನ ಸೀಟುಗಳನ್ನು ನೋಡುತ್ತಿರುವುದು ಇದೇ ಮೊದಲಬಾರಿ.
ಸರಿ, ತಪ್ಪಾಗಿದೆಯೆಂದು ಅವನಿಗೆ ಅರ್ಥವಾಗಿತ್ತು. ಅದನ್ನು ಅವನು ಒಪ್ಪಿಕೊಂಡೂ ಇದ್ದ. ಅಷ್ಟಾದರು ಕೆಲವರು ಕೂಗುವುದನ್ನು ನಿಲ್ಲಿಸಿರಲಿಲ್ಲ. ಅವರ ರಗಳೆಗಳನ್ನೆಲ್ಲಾ ಮುಗಿಸಿ ನನ್ನ ಬಳಿಗೆ ಬಂದ. ನಾನಂದೆ,
"ನೋಡಿ, ಆಗಿದ್ ಆಯ್ತು. ನಿಮ್ಗೆ ಗೊತ್ತಿಲ್ಲದೆ ಹೀಗೆ ಮಾಡಿದೀರ. ನನಗೆ ಸ್ಲೀಪಿಂಗ್ ಕೊಡೋದಾರೆ ಸಿಂಗಲ್ ಕೊಡಿ. ಇಲ್ಲ ಅಂದ್ರೆ ಕುತ್ಕೊಂಡ್ ಹೋಗೋಕ್ ಒಂದ್ ಸೀಟ್ ಕೊಡಿ. ಅದೂ ಆಗಲ್ಲ ಅಂದ್ರೆ ಹೇಳಿ, ಮುಂದೆ ಯೋಚ್ನೆ ಮಾಡ್ತೀನಿ".
ಸ್ಲೀಪಿಂಗ್’ನಲ್ಲಿ ಈಗ ಒಬ್ಬೊಬ್ಬರಿಗೆ ಕೊಟ್ಟಾಗಿತ್ತು. ಭಾನುವಾರವಾದ್ದರಿಂದ sittingಕೂಡ ಫುಲ್ಲಾಗಿತ್ತು. ಏಜೆಂಟ್ ತಲೆ ಕೆರೆದುಕೊಳ್ಳುತ್ತಾ ಸುಮ್ಮನೆ ನಿಂತಿದ್ದ. ನಾನಿನ್ನು ಟಿಕೆಟ್ಟಿನ ದುಡ್ಡು ಕೊಟ್ಟಿರಲಿಲ್ಲ. ಚಾಲಕನ ಹತ್ತಿರ ಮಾತಾಡುತ್ತಿದ್ದ ಬಸ್ಸಿನ ಮಾಲೀಕರು ಒಳಗೆ ಬಂದರು. ಸಾಗರದಲ್ಲಿ ಯಾವುದಾದರು adjust ಮಾಡಿಕೊಡುತ್ತೇನೆಂದು ಬಸ್ಸಿನ ಮಾಲೀಕರು ಭರವಸೆಯಿತ್ತರು. ಅವರ ಮಾತನ್ನು ನಂಬದೆ ನನಗೆ ಬೇರೆ ದಾರಿಯಿರಲಿಲ್ಲ.
ಏಜೆಂಟರು ದುಡ್ಡು ಲೆಕ್ಕಮಾಡಿ ಮಾಲೀಕರಿಗೆ ಕೊಟ್ಟು, ನನಗೆ ಏನಾದರು ವ್ಯವಸ್ಥೆಮಾಡಿ ಬೆಂಗಳೂರಿಗೆ ಕಳಿಸಬೇಕೆಂದು ಅವರಲ್ಲಿ ಕೇಳಿಕೊಂಡರು. ಮತ್ತು ನನ್ನತ್ತ ತಿರುಗಿ, "ಇದೊಂದ್ ಸರಿ ಅಡ್ಜಸ್ಟ್ ಮಾಡ್ಕಳಿ ಸರ್.. ಫಸ್ಟ್ ಟೈಮ್ ಅಲ್ವಾ.. ಹಂಗಾಗಿ.." ಎಂದು ನಗುವ ಪ್ರಯತ್ನ ಮಾಡುತ್ತಾ ಬಸ್ಸಿಳಿದು ಹೋದರು. ಬಸ್ಸು ಹೊರಡುತ್ತಿದ್ದ ಹಾಗೆ ನಾನು ಕೆಳಗಡೆಯ ಹಾಸಿಗೆಯ ಮೇಲೆ, ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತೆ. ನನ್ನ ಎದುರಿನ ಸೀಟಿನಲ್ಲಿ ಕುಳಿತಿದ್ದ ಬಸ್ ಮಾಲೀಕರು ಕಾಲಿನ ಮೇಲೆ ಕಾಲು ಮಾಡಿತ್ತಿದ್ದರು. ಅವರ ಮುಖ ನೋಡಿಯೇ ಹೇಳಬಹುದಿತ್ತು; ಎಲ್ಲೂ adjust ಆಗುತ್ತಿಲ್ಲವೆಂದು.
ಸರಿ, ನನ್ನ ಪಾಲಿನ ಪ್ರಯತ್ನ ಮಾಡೋಣವೆಂದು ಆದಿತ್ಯನಿಗೆ ಫೋನಾಯಿಸಿದೆ. ಹಿಂದಿನ ದಿನ ಕಲ್ಗಾರಲ್ಲಿ ಸಿಕ್ಕಾಗ ಒಂದು ಎಕ್ಸ್ಟ್ರಾ ಟಿಕೆಟ್ ಇದೆಯೆಂದು ಹೇಳಿದ್ದ. ಅದನ್ನು ಯಾರಿಗೊ ಕೊಟ್ಟಾಗಿಹೋಗಿತ್ತು. ಶ್ರೀಧರನಿಗೆ ಫೋನ್ ಮಾಡಿದೆ, ಪ್ರಯತ್ನಿಸುತ್ತೇನೆಂದ. ಸುಮ್ಮನೆ ಕುಳಿತಿರಲಾಗಲಿಲ್ಲ, ಮತ್ತೆ ಶ್ರೀಧರನಿಗೆ ಫೋನಾಯಿಸಿದೆ.
"ಹೋ ಹೋ, ತಗಂಬುಟಿದಿ. ನಮ್ ಬಸ್ಸೇ ಸೈ.. ಮಹಾರಾಜ.. ನೀ ಏನು ತಲೆ ಕೆಡ್’ಶ್ಗ್ಯಳಡ.. ಸೀದ ಬಂದ್ಬುಡು" ಅಂದ.
ಸಕ್ಕತ್ ಸಮಾಧಾನ.. ಟೆನ್ಶನ್ ಎಲ್ಲ ಕಮ್ಮಿ ಆಗಿ, ಮುಖದಲ್ಲೊಂದು ಮಂದಹಾಸ.. ಊಹೂಂ! ಸಂಪೂರ್ಣವಾಗಿ ಮೂಡಿರಲಿಲ್ಲ.. ಆ ಕಡೆಯಿಂದ ಶ್ರೀಧರ ಹೇಳುತ್ತಿದ್ದ.. "೧೦ ಗಂಟಿಗೆ ಬಿಡದು ಬಸ್ಸು.. ಎಲ್ಲಿದ್ದೆ ನೀನು?!"
ಹುಹ್!! ಅಗಳ ಹಾರಿ ಇಬ್ಬೆಟ್ ಬಿಟ್ಟಾಂಗಾತು ಅಂದುಕೊಂಡೆ.. ನಾನಾಗ ಇನ್ನು ಸೊರಬ ಬಿಟ್ಟಿದ್ದೆ ಅಷ್ಟೆ. ಆಗಲೇ ೯:೩೦ ಆಗ್ಯೋಗಿತ್ತು. ಏನು ಮಾಡುವುದೆಂದು ತೋಚದೆ ಚಾಲಕನ ಬಳಿ ಹೋಗಿ ಸ್ವಲ್ಪ ವೇಗವಾಗಿ ಓಡಿಸುವಂತೆ ಕೇಳಿಕೊಂಡರೆ ಅವನು ಹಾಳಾದ ರಸ್ತೆಯನ್ನು ಬೈಯ್ಯಲು ಶುರುಮಾಡಿದ.
ಏನಾದರಾಗಲಿ ಎಂದು ಶ್ರೀಧರನಿಗೆ ಫೋನ್ ಮಾಡಿ ನಾನು ಬರುವ ತನಕ ಕಾಯುವಂತೆ ಮಹಾರಾಜ ಬಸ್ಸಿನ ಚಾಲಕನ ಮನವೊಲಿಸುವುದೊಂದೇ ದಾರಿಯೆಂದೂ, ಅದನ್ನು ಹೇಗಾದರೂ ಮಾಡಲೇಬೇಕೆಂದೂ ಹೇಳಿದೆ. ಯಾಕೆಂದರೆ ಕೊನೆ ಕ್ಷಣದಲ್ಲಿ ಸಿಕ್ಕೊಂದು ಟಿಕೆಟ್ಟೂ ಹೋಗಿಬಿಟ್ಟರೆ ಮತ್ತೊಂದು ಟಿಕೆಟ್ ಸಿಗುವುದು ಕನಸೇ ಸೈ ಎಂದು ಚೆನ್ನಾಗಿ ಗೊತ್ತಿತ್ತು.
ಅಷ್ಟರಲ್ಲಿ ಸಿಗ್ನಲ್ ಹೋಗಿದ್ದರಿಂದ, ನಾನು ಮತ್ತು ಬಸ್ಸಿನ ಮಾಲೀಕರು ನಮ್ನಮ್ಮ ಫೋನುಗಳನ್ನು ಕಿಸೆಗಿಳಿಸಿ ಮಾತಿಗಿಳಿದೆವು. ಮೊದಲು ನಾನೇ ಪರಿಚಯ ಮಾಡಿಕೊಂಡೆ, ನಂತರ ಅವರು ತಮ್ಮ ಪರಿಚಯವನ್ನು ಹೇಳಿಕೊಂಡರು. ೧೮ ವರ್ಷ ಬೆಂಗಳೂರಿನಲ್ಲಿದ್ದವರು, ಕೆಲಸಕ್ಕೆ ವಿದಾಯ ಹೇಳಿ ಸಾಗರಕ್ಕೆ ಹೋಗಿ ಬಸ್ ಸರ್ವಿಸ್ ಪ್ರಾರಂಭಮಾಡಿದ ಕತೆ ಹೇಳ ತೊಡಗಿದರು.
ಬಹಳ ಆಸಕ್ತಿಯಿಂದ ಮಾತಾಡುತ್ತಾ ಕುಳಿತಿದ್ದರಿಂದ ದಾರಿ ಸಾಗಿದ್ದೇ ಗೊತ್ತಾಗಲಿಲ್ಲ. ಅವರ ಬ್ಯುಸಿನೆಸ್ಸಿನಲ್ಲಿನ ನೂರಾರು ಸಮಸ್ಯೆಗಳು, ಬೆಂಗಳೂರಿಗೆ ಹೋಗಿ ಬರುವವರ ಸಂಖ್ಯೆಯಲ್ಲಿ ಹೆಚ್ಚಳ, ಭಾನುವಾರ ಡಿಮ್ಯಾಂಡ್ ಹೇಗೆ ಹ್ಯಾಂಡಲ್ ಮಾಡುವುದು, ದುಬಾರಿ ಪರ್ಮಿಟ್ಟುಗಳು, ಏಜೆಂಟರು ಮತ್ತು ಚಾಲಕರಿಂದಾಗಬಹುದಾದ ಮೋಸ ಮತ್ತು ಅದನ್ನು ಕಂಡು ಹಿಡಿಯುವ ಮತ್ತು ತಡೆಗಟ್ಟುವ ವಿಧಾನಗಳು. ನಾನು ಶಿವಮೊಗ್ಗ-ಸಾಗರ ರೈಲಿನಿಂದಾಗುವ ಪರಿಣಾಮದ ಬಗ್ಗೆ ಮಾತನಾಡಿದೆ. ಒಟ್ಟಿನಲ್ಲಿ ಸುಮಾರು ೪೦ ನಿಮಿಷದ ಮಾತಿನಲ್ಲಿ ಬಹಳ ಆಸಕ್ತಿಕರ ವಿಷಯಗಳು ಹೊರಗೆಬಂದವು. ಮುಖ್ಯವಾಗಿ, ಸ್ಲೀಪರ್ ಕೋಚ್’ಗೆ ಹೊಸದಾಗಿ ಪರವಾನಗಿ ಕೊಡುವುದನ್ನು ನಿಲ್ಲಿಸಿರುವುದು, ಆಂಧ್ರ ಸರ್ಕಾರದ ತೀರ್ಮಾನ, ಅದರ ಹಿಂದಿನ ಘಟನೆ, ಅದರಲ್ಲಿನ adjustmentಗಳು.. hmm..
ಎಲ್ಲಕ್ಕಿಂತ ಸಂತೋಷದ ವಿಚಾರವೆಂದರೆ, ಅವರು ಅಂದು ರಾತ್ರಿ ಏಜೆಂಟರ ಅಚಾತುರ್ಯದಿಂದ ಸೊರಬದಿಂದ ಹೊರಟ ಪ್ರಯಾಣಿಕರಿಗಾದ ತೊಂದರೆಯಾದದ್ದನ್ನು ಒಪ್ಪಿಕೊಂಡಿದ್ದು. ತಪ್ಪಿನ ಒಂದಂಶವನ್ನೂ ಸಮರ್ತಿಸಿಕೊಳ್ಳಲು ಪ್ರಯತ್ನ ಮಾಡದೇ ಇದ್ದಿದ್ದು. ತಪ್ಪಿನ ಸಂಪೂರ್ಣ ಹೊಣೆಯನ್ನು ಹೊತ್ತುಕೊಂಡಿದ್ದು. ತಪ್ಪನ್ನು ತಿದ್ದಿಕೊಳ್ಳುವ ಭರವಸೆಕೊಟ್ಟಿದ್ದು ಮತ್ತು ಅದನ್ನು ಹೇಗೆ ನಿರ್ವಹಿಸುತ್ತಾರೆಂಬುದನ್ನು ನನಗೆ ಮನವರಿಕೆಯಾಗುವ ಮಟ್ಟಿಗೆ ವಿವರಿಸಿದ್ದು!
ಇತ್ಲಗೆ, ಸಿಗ್ನಲ್ ಸಿಗ್ತಿದ್ದಂಗೆ ಫೋನು.. ಎಲ್ಲಿದ್ದೆ? ಎಲ್ಲಿದ್ದೆ? ಟೈಮು ೧೦:೧೦.. ಸದ್ಯ, ಆ ಬಸ್ಸು ಇನ್ನು ಹೊರಟಿರಲಿಲ್ಲ. ಸಾಗರ ತಲುಪಲು ನನಗೆ ಇನ್ನೂ ಕನಿಷ್ಟ ೧೦ ನಿಮಿಷ ಬೇಕಿತ್ತು. ಹಾಗಾಗಿ ಬಿ.ಹೆಚ್. ರೋಡಿನಲ್ಲೇ ಇಳಿದುಕೊಳ್ಳಲು ಶ್ರೀಧರ ಹೇಳಿದ. ಅವರ ಬಸ್ಸು ಅಲ್ಲಿಗೆ ಬರಲು ಹೇಗೂ ೫ ನಿಮಿಷ ಬೇಕೇ ಬೇಕು.
ಅಂತೂ ಸುಮಾರು ೧೦:೩೦ರ ಸಮಯಕ್ಕೆ ಮಹಾರಾಜ ಬಸ್ಸು ಬಂದು ನಿಂತಾಗ, ಓಡಿ ಹತ್ತಿ ಎದುರಿಗೇ ನಿಂತಿದ್ದ ಶ್ರೀಧರನಿಗೊಂದು ದೊಡ್ಡ ಥ್ಯಾಂಕ್ಸ್ ಹೇಳಿದೆ. ಹೆಗಲ ಮೇಲಿನ ಭಾರ ಸೀಟಿಗಿಳಿಯುತ್ತಿದ್ದಂತೆ ಮನಸ್ಸಿನ ಭಾರವೆಲ್ಲ ಇಳಿದು ಹಗುರಾದೆ.
ಆದಿತ್ಯನ ತಮಾಷೆಯ ಮಾತುಗಳು, ನಗೆಯ ಹೊಳೆ, ಹಿಂದಿನ ಸಾಲಿನ ಜೋಕುಗಳು.. ಬಿದ್ದು ಬಿದ್ದು ನಕ್ಕಿದ್ದು, ನಕ್ಕು ನಕ್ಕು ಬಿದ್ದಿದ್ದು.. ಏನೇ ಆಗ್ಲಿ, ಸುರಕ್ಷಿತವಾಗಿ ಸೋಮವಾರ ಬೆಳಿಗ್ಗೆ ಬೆಂಗಳೂರಲ್ಲೆದ್ದೆ. ಒಂದು ನೆನಪಿನಲ್ಲುಳಿಯುವಂತಹ ರಾತ್ರಿ.
Monday, February 16, 2009
Subscribe to:
Post Comments (Atom)


7 comments:
ಓಹೋ! ಇಷ್ಟೆಲ್ಲಾ ಇದ್ದಾ ಕತೆ..? ನಂಗ್ ಹೆಂಗ್ ಗೊತ್ತಾಗವು? ಪರ್ವತ ಬಸ್ಸು ಸಾಗರದ ಬಸ್ಟ್ಯಾಂಡಿಗೆ ಬರ್ತಿದ್ದಾಂಗೆ ’ಅರೆ! ಸಂದೀಪ ಇದ್ರಗೇ ಹೋಗ್ತಿ ಅಂತ ಹೇಳಿದ್ದಲ್ದಾ?’ ಅಂದ್ಕಂಡು ನಿಂಗೆ ಫೋನ್ ಹೊಡ್ದಿ! ನೀ ’ಅದ್ರಗಿಲ್ಲೆ ನಾನು’ ಅಂದಾವಾಗ ’ಎಂಥಾತೇನ, ಹೋಗ್ಲಿ ಬಿಡು’ ಅಂದ್ಕಂಡು ಸುಮ್ನಾದಿ. :)
ಆಮೇಲೆ, ಅವತ್ ರಾತ್ರಿ ನನ್ ಕತೆಯೂ ಹೈಲು ಮಾರಾಯಾ.. ಹನ್ನೊಂದು ಗಂಟಿಗೆ ಕಾರವಾರದಿಂದ ಬರ್ಬೇಕಿದ್ದ ಸೀಬರ್ಡ್ ಬಸ್ಸು ಬಂದಿದ್ದು 12:30ಗೆ! ಸಾಗರದ ಬಸ್ಟ್ಯಾಂಡಲ್ಲಿ ಬೀದಿ ನಾಯಿಗಳ ಜೊತೆ ಮಧ್ರಾತ್ರಿವರೆಗೆ ನಿಂತ್ಕಳದು ಇದ್ದಲಾ.. ಅದ್ರಕಿಂತ ನರಕ ಎಷ್ಟೋ ವಾಸಿ! ಯಜ್ಞೇಶಣ್ಣನ್ನ ಕೇಳು. :D
ಸಂದೀಪಾ,
ಲೇಖನ ಚೆನ್ನಾಗಿದ್ದು. ನೀನು ದೇಹ ಪೂರ್ತಿ ಪಂಚೆ ಹೊದ್ಕಂಡು (ಡಮ್ ಆದಾಗ ಬೇರೆಯವ್ರು ಪಂಚೆ ಹೊಚ್ಚೋ ರೀತಿ) ಲಾಸ್ಟ್ ಸೀಟಲ್ಲಿ ನಿದ್ರೆ ಮಾಡ್ತಾಯಿರ ಫೋಟೋನ ವೇಣು ತೆಗದ್ದ. ಒಳ್ಳೇ ಪೋಸ್ಟ್ ಮಾರ್ಟಮ್ ಮಾಡಿ ಬಾಡಿ ಕೊಡಕಿರೆ ಇದ್ದ ಹಂಗೆ ಇದ್ದು. ಫೋಟೋ ಕಳ್ಸಕೆ ಹೇಳ್ತಿ. ಅದನ್ನ ಬ್ಲಾಗಲ್ಲಿ ಹಾಕು..
ನಿಂದಾದ್ರು ಓಕೆ ಮಾರಾಯ.. ಸುಶೃತ ಒಂಬತ್ತು ಘಂಟೆಗೆ ಸಾಗರಕ್ಕೆ ಬಂದಿದ್ದ. ಅವ್ನ ಬಸ್ಸು ಹನ್ನೊಂದು ಕಾಲಿಗೆ.. ಬರೋಬ್ಬರಿ ಹನ್ನೆರಡೂವರೆಗೆ ಬಂತು. ನನ್ನ ಬಸ್ಸು ಹನ್ನೊಂದು ಮುಕ್ಕಾಲಿಗೆ ಇದ್ದಿದ್ದು ಬಂದಿದ್ದು ಒಂದು ಘಂಟೆಗೆ..ಒಳ್ಳೇ ಬಸ್ಸು ಪುರಾಣ
ಪರ್ವತ ಹತ್ತಿ ಸಾಗರಕ್ಕೆ ಬಂದು ಇಳದ್ಯಾ?! ಅಬ್ಬಾ!... ಸಾಗರದಲ್ಲೂ ವಿನಯ ಟ್ರಾವೆಲ್ಸ್ ಎನ್ನುವ ಒಂದು ಟಿಕೆಟ್ ಬುಕ್ಕಿಂಗ್ ಆಫೀಸ್ ಇದೆ ಅಲ್ಲಿನ ಶಾನಭೋಗ ಎನ್ನುವ ಏಜೆಂಟ್ ಕೂಡಾ ಅಷ್ಟೆ.. ಎಲ್ಲಾ ಬಸ್ಸಿಗೂ ತಿಕೇಟು! ಬುಕ್ ಮಾಡ್ತಿನಿ ತಾನೇ ಎಲ್ಲಾ ಬಸ್ಸಿಗೆ ಏಜೆಂಟ್ ಹೇಳ್ತಾನೆ!, ಸೀ ಬರ್ಡ್ ಬುಕ್ಕಿಂಗ್ ಅಂತನೂ ಬೋರ್ಡ್ ಇದೆ, ಆದ್ರೆ ಸೀ ಬರ್ಡ್ ನ ನಿಜವಾದ ಆಫೀಸ್ ಅಲ್ಲೇ ಹತ್ತಿರದಲ್ಲೆ ಅದೇ ಕಾಂಪ್ಲೆಕ್ಸ್ ನಲ್ಲಿ ಇರುವುದು ಇನ್ನೊಂದು ವಿಪರ್ಯಾಸ. ಅವನೂ ನಂಗೆ ಎರಡು ಮೂರು ತೊಂದರೆ ಕೊಟಿದ್ದ, ನಾನು ಸೀ ಬರ್ಡ್ ಬಸ್ಸಿಗೆ ಒಂದು ಸ್ಲೀಪರ್ ಟಿಕೇಟ್ ತೆಗೆಸಲು ಹೋಗಿದ್ದೆ, ಆತ ಅದ್ಯಾವುದೋ ಚಾರ್ಟ್ ತೋರಿಸಿ ಎಲ್ಲಾ ಸೀಟುಗಳು ಖಾಲಿಯಿದೆ ಎಂದ, ಚಾರ್ಟ್ ನ ಮೇಲೆ ಮೇಲೆ ಬಸ್ಸಿನ ಹೆಸರಿಲ್ಲ.. ಸೀಟಿನ/ಮಂಚದ ನಂಬರ್ ಆದರೂ ಸರಿಯಾಗಿತ್ತಾ ಅದೂ ಇರಲಿಲ್ಲ.. ಚಾರ್ಟ್ ಹೇಗಿದ್ದರೇನು ಬಸ್ಸಂತು ಸೀ ಬರ್ಡ್ ಚನ್ನಾಗಿದೆ ಅಂತ ಎಲ್ಲರೂ ಹೇಳ್ತ ಹೆಂಗು ಅಂತ ಒಂದು ಅಪ್ಪರ್ ಭರ್ತನ್ನು ಆಯ್ಕೆ ಮಾಡಿ ಅದನ್ನೇ ಕೊಡಿ ಎಂದು ಹೇಳಿದೆ, ಆತ ಟಿಕೇಟಿನ ರಶೀದಿ ಬರೆಯಲು ಪ್ರಾರಂಬಿಸಿದ ಬಸ್ಸಿನ ಸೀಟ್ ನ ನಂಬರ್ ಬರೆದ.. ನೋಡ ನೋಡುತ್ತಿದ್ದಂತೆ ಶ್ರೀ ದುರ್ಗಾ ಎಂದು ಟಿಕೇಟಿನ ಮೇಲೆ ಬರೆಯತೊಡಗಿದ.. ಇರಲಿ ದೇವರ ಹೆಸರು ಬರೆಯುತ್ತಿದ್ದಾರೆಂದುಕೊಂಡೆ.. ಆದರೂ ಮನಸ್ಸು ತಡೆಯಲಿಲ್ಲ.. ಇದು ಸೀ ಬರ್ಡ್ ತಾನೇ ಕೇಳಿಯೇ ಬಿಟ್ಟೆ.. ಆತ ಹೇಳತೊಡಗಿದ, ಶ್ರೀ ದುರ್ಗಾ ಅಂತ ಹೊಸಾ!! ಸ್ಲೀಪರ್ ಬಸ್ಸು ಬಂದಿದೆ... ನೀವು ಒಂದ್ ಸರಿ ನೋಡಿ ಮುಂದಿನ ಸಾರಿನೂ ಶ್ರೀ ದುರ್ಗಾ ನೆ ಕೊಡಿ ಹೇಳ್ತೀರ ಹೇಳಿದ... ಬಸ್ಸು ಎಲ್ಲಿದೆ ನೋಡೋಣ ಎಂದು ಕೇಳಿದರೆ ಹೋಗ್ಬೇಕಿದ್ದರೆ ನೋಡ್ತೀರಲ್ಲ ಎಂದ! ಜೊತೆಗೆ ಫೋನ್ ನಂಬರ್ ಬರೆಸಿಕೊಳ್ಳಲು ಮರೆಯಲಿಲ್ಲ..ಏನಾದರೂ ಹೆಚ್ಚು-ಕಡಿಮೆಯಾದರೆ(ಹೆಚ್ಚು ಕಡಿಮೆ ಆಗುವ ಸಂಭವದ ಅನುಮಾನ ಆತನಿಗಿತ್ತು) ಬೇಕೆಂದು ಹೇಳಿದ,ಒಂದು ದಿನ ಮುಂಚಿತವಾಗಿಯೇ ನಾನು ಬುಕ್ ಮಾಡಿದ್ದೆ.. ಮಾರನೇ ದಿನ ಆತ ಪೋನ್ ಮಾಡಿ ಇವತ್ತು ಎಂಟು ಘಂಟೆಗೆ ಸಾಗರಕ್ಕೆ ಬನ್ನಿ ಶ್ರೀ ದುರ್ಗಾ ಕ್ಯಾನ್ಸಲ್ ಆಗಿದೆ ಬೇರೆ ಬಸ್ಸಿಗೆ ಅಡ್ಜಸ್ಟ್ ಮಾಡುತ್ತೇನೆ ಹೇಳಿದ, ಆಮೇಲೆ ರಾಜ ಹಂಸ ಬಸ್ಸಿಗೆ ನನ್ನಂತೆ ಇನ್ನೂ ಅನೇಕರನ್ನು ಹತ್ತಿಸಿ ಸೀಟು ಹುಡುಕಲು ಪ್ರಾರಂಭಿಸಿದ, ಆವಾಗಲೇ ಆತನ ಬಣ್ಣ ಬಯಲಾಗಿದ್ದು, ಬಸ್ಸಿನಲ್ಲಿ ಇದ್ದ ಕೆಲವರು ಹೇಳತೊಡಗಿದರು ರೀ ಶಾನಭೋಗ್ರೆ.. ದಿನಾ ಇದೇ ಆಯ್ತಲ್ರಿ ನಿಮ್ಮ ರಗಳೆ ಎಂದು
ಯಾವ್ದೋ ಚಾರಣದ ಬಗ್ಗೆ ಬರದ್ದೆ ಅಂದ್ಕಂಡ್ರೆ..
ಆದಿತ್ಯ, ನನ್ ಕಥೆನೂ ಅಷ್ಟೇ.. ಒಂದೇ ಒಂದ್ ಸಲ ನಾನು ಸಾಗರದಿಂದ ಬುಕ್ ಮಾಡ್ಸಿ ಬಂದಿದ್ದು.. ಆಗ ಇದೇ ಶಾನುಭೋಗನ ಕಥೆ....
@ಸುಶ್ರುತ,
:-)
ತೋ, ತೊತೊ! ನೀನು ಸುಮಾರ್ ಒದ್ದಾಡಿದ್ದೆ ಹಂಗಾರೆ?! ಈಗ ಸ್ವಲ್ಪ ಸಮಾಧಾನಾತು ನೋಡು!
@ಯಜ್ಞೇಶ್,
ಸಂದೀಪಾ ಅಲ್ದೊ ಮಾರಾಯ. ಸಂದೀಪ ಸಾಕು!
ಓಹಾ! ಅದ್ಯಾವ್ ಮಾಯ್ದಗ್ ಬಂದ್ ಫೋಟೊ ತೆಗದ್ನೊ ಮಾರಾಯ??
ಒಬ್ಬೊಬ್ರಿದ್ ಒಂದೊಂದ್ ಕತೆ ಆಯ್ದು ಅಂತಾತು ಹಂಗರೆ.. ಹ್ಮ್ಮ್..
@ಮನಸ್ವಿ,
"ಪರ್ವತ ಹತ್ತಿ ಸಾಗರದಲ್ಲಿ ಇಳದಿ" ಹಹ್ಹ.. :)
ನಂಗೆ ಇದು ಉದ್ದೇಶಪೂರ್ವಕವಾಗಿ ಮಾಡಿದ್ದಾಗಿರ್ಲೆ. ಹಂಗಾಗಿ ನೀ ಹೇಳ ವಿಷ್ಯಕ್ಕು, ನಂಗ್ ಆಗಿದ್ದಕ್ಕು ಸುಮಾರ್ ವ್ಯತ್ಯಾಸ ಇದ್ದು!
@ಹರೀಶ,
ಚಾರಣದಲ್ಲಿ ಹಿಂಗಾದ್ರೆ ಇಷ್ಟು ಬೇಜಾರಾಗ್ತಿರ್ಲೆ ಮಾರಾಯ.. ಮನೀಂದ ಬರಕ್ಕಾರ್ ಹಿಂಗಾಗೋತಲಾ ಅಂತ...
ಥೋ ಮನಿಂದ ಬರಕಾದ್ರೆ ಇದೊಂದು ರಗಳೆ ಮರಯಾ.
ರೈಲ್ ಯಾವಾಗ್ ಶುರು ಆಕ್ತೋ ಎನೋ ? ಮನಿಂದ ಬರಕಾದ್ರೆ ಬಸ್ ನೆನಪು ಮಾಡ್ಕೆಂಡ್ರೆ ಅಲ್ಲೆ ಇಪ್ಪನ ಬಪ್ಪದು ಬ್ಯಾಡಾ ಕಾಣ್ತು.
ಸಮಸ್ಯೆ. ಪ್ರತಿ ಸಾರಿ ಎನಾದ್ರು ಒಂದು ಕಿರಿಕಿರಿ ಇದ್ದಿದ್ದೆ...
@ರಂಜನಾ,
ಹ್ಮ್ಮ್.. ರೈಲು ಇನ್ನೊಂದೆರಡ್ ವರ್ಷ ಅಂತು ಕೇಳಡ..
ರಗಳೆ ಇದ್ದಿದ್ದೆ ಸೈ ನೀ ಹೆಳಿದಂಗೆ..
Post a Comment