Friday, February 20, 2009

ಲೆಕ್ಕದ ಸಮಯ


ನಾನು ಈ ಬ್ಲಾಗನ್ನು ಎಂದು ಪ್ರಾರಂಭಿಸಿದೆನೆಂದು ನನಗೆ ನೆನಪಿಲ್ಲ. ಹಾಗಾಗಿ ನನ್ನ ಮೊದಲಿನ ಬರಹದ ದಿನಾಂಕವನ್ನೇ ಬ್ಲಾಗಿನ ಅಧಿಕೃತ ಜನ್ಮದಿನವೆಂದು ಪರಿಗಣಿಸಿದ್ದೇನೆ. ಆ ದಿನ, ಏಪ್ರಿಲ್ ೨೬, ೨೦೦೫ರ ಮಂಗಳವಾರ. ಇಂದಿಗೆ ಸುಮಾರು ೪೬ ತಿಂಗಳು ತುಂಬಿದ ಈ ಬ್ಲಾಗಿಗೆ ಬಂದು ಹೋದವರ ಲೆಕ್ಕಮಾಡುವ ಮನಸ್ಸಾಗುತ್ತಿದೆ.

ಬ್ಲಾಗಿನ ಜೊತೆ ಜೊತೆಗೇ Stat Counter ನ ಬಳಕೆ ಪ್ರಾರಂಭಿಸಿದೆ. ಸುಮಾರು ಎರಡು ವರ್ಷಗಳವರೆಗೆ ಬ್ಲಾಗಿಗೆ ಭೇಟಿಕೊಟ್ಟವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದ್ದೆ. ಆದರೆ, ಯಾವಾಗಲೊ ಬ್ಲಾಗಿನ template ಬದಲಾಯಿಸುವಾಗ Stat Counter ಗೆ ಬೇಕಾದ ಕೋಡನ್ನು ಕಳೆದುಕೊಂಡು, ಮತ್ತೊಮ್ಮೆ ಪಾಸ್ವರ್ಡ ಮರೆತುಹೋಗಿ, ಏನೇನೊ ಆಗಿ ಮಾಹಿತಿಯೆಲ್ಲ ಮಾಯವಾಗಿ ಹೋಯಿತು. ಆನಂತರ ಎಷ್ಟೊ ತಿಂಗಳುಗಳ ತನಕ hitಉಗಳ ಬಗ್ಗೆ ಯೋಚಿಸುವುದನ್ನೇ ಬಿಟ್ಟುಬಿಟ್ಟಿದ್ದೆ.

ಇಂದಿನ ಬರಹದ ಅಂಕಿಅಂಶಗಳೆಲ್ಲ ಹೆಚ್ಚಾಗಿ ಇತ್ತೀಚಿನ (೮-೧೦ ತಿಂಗಳುಗಳ)ವು.

Referring Links: ಎಲ್ಲಿಂದ ಬಂದಿರಿ?
ವಿ.ಸೂ:
೧. ಕೊಂಡಿಯ ಮೊದಲು ಕಾಣಬರುವ ಸಂಖ್ಯೆಯು, ಆ ತಾಣದಿಂದ ನನ್ನ ಬ್ಲಾಗಿಗೆ ಬಂದವರೆಷ್ಟೆಂದು ಹೇಳುತ್ತದೆ.

೨. ೨ಕ್ಕಿಂತ ಕಡಿಮೆ ಜನರಿಗೆ ನನ್ನ ಬ್ಲಾಗಿನ ದಾರಿತೋರಿಸಿದ ತಾಣಗಳನ್ನು ಇಲ್ಲಿ ಹೆಸರಿಸಿಲ್ಲ.

Returning Visits : ಮರಳಿ ಬಂದವರೆಷ್ಟು?



First Time Visits
◙ 66.2%
1-5 Returning Visits
◙ 22.9%
5-10 Returning Visits
◙ 5.8%
10+ Returning Visits
◙ 5.0%

ಯಾವ್ ಯಾವ್ ದೇಶದಿಂದ ??


ಸದ್ಯಕ್ಕೆ ಇಷ್ಟು ಸಾಕು. Stat Counter ನಿಂದ ನನಗೆ ಬಹಳ ಪ್ರಯೋಜನವಾಗಿದೆ. ನೀವೂ ಒಮ್ಮೆ ಉಪಯೋಗಿಸಿ ನೋಡಿ.

ಅಂದಹಾಗೆ, ನಿಮ್ಮ ಬ್ಲಾಗಿಗೆ ಎಲ್ಲೆಲ್ಲಿಂದ ಕೊಂಡಿಗಳಿವೆ ಎಂದು ತಿಳಿಯಲು ಸುಲಬೋಪಾಯವೆಂದರೆ Google ಗೆ ಹೋಗಿ
link:your-blog-url ಎಂದು ಹುಡುಕುವುದು.

ಉದಾಹರಣೆಗೆ, ನನ್ನ ಬ್ಲಾಗಿಗೆ ಅಂತರ್ಜಾಲದ ಯಾವ್ಯಾವ ತಾಣದಿಂದ ಕೊಂಡಿಗಳಿವೆಯೆಂದು ಇಲ್ಲಿ ನೋಡಬಹುದು.

ಇದನ್ನೆಲ್ಲ ಇಲ್ಲಿ ಏಕೆ ಬರೆಯುತ್ತಿದ್ದೇನೆಂದರೆ, ಈ ಮಾಹಿತಿಯೆಲ್ಲಾ ಮತ್ತೊಮ್ಮೆ ಮಾಯವಾಗುವ ಸಂಭವವಿದೆ!!

Monday, February 16, 2009

ಪರ್ವತ ಪುರಾಣ

ಮೊನ್ನೆ ೧೪/೧೫ ನಡಹಳ್ಳಿಗೆ ಹೋಗಿದ್ದೆ. ಹಿಂದೆ ಮುಂದೆ ರಜವಿಲ್ಲದಿದ್ದರೆ ಶುಕ್ರವಾರ ರಾತ್ರಿ ಬೆಂಗಳೂರಿಂದ ಹೊರಟು ಶನಿವಾರ ತಲುಪಿ ಮತ್ತೆ ಅಲ್ಲಿಂದ ಭಾನುವಾರ ರಾತ್ರಿ ಮರಳಿ ಹೊರಡುವುದು ಹೊಸತೇನಲ್ಲ. ನಮ್ಮೂರಿಗೆ ಹತ್ತಿರದ ಪಟ್ಟಣ ಸೊರಬ, ನಮ್ಮ ತಾಲ್ಲೂಕಿನ ಕೇಂದ್ರ. ಅಲ್ಲಿಂದಲೇ ಬೆಂಗಳೂರಿಗೆ direct ಬಸ್ ಇದೆ. ಮೊದಲೆಲ್ಲ ಜಾಸ್ತಿ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯೇ ಇರಲಿಲ್ಲ. ಇದ್ದಿದ್ದು ಒಂದು ಸಿರ್ಸಿ-ಬೆಂಗಳೂರು (semi luxury) ಮತ್ತೊಂದು ಹಾನ್ಗಲ್-ಬೆಂಗಳೂರ್ ಬಸ್ಸು(super deluxe!).

ಆಮೇಲೆ ಸಿರ್ಸಿ ಲೈನಿಗೆ ದೊಡ್ ಬಸ್ ಬಂತು. ಆ ಟೈಮಿಗೆ ಸೊರಬದಿಂದಲೇ ಹೊರಡೊ ಒಂದು ಪ್ರೈವೇಟ್ ಬಸ್ ಶುರುವಾತು. ವರ್ಷ ಎರಡೊರ್ಷಕ್ಕೆ ಅದು ನಿಂತು ಹೋಯಿತು. ನಂತರದ್ದು ಸೋನಿ ಬಸ್ಸು. ಬಹಳ ಒಳ್ಳೇ ಬಸ್ಸು. ಲೋಕಲ್ ಸೀಟ್ ಸ್ವಲ್ಪ ಜಾಸ್ತಿ. ನಾನು ದಾವಣಗೆರೆಯಲ್ಲಿ ಓದುತ್ತಿದ್ದಾಗ ಸೋನಿ ಬಸ್ಸಿನಲ್ಲಿ ತುಂಬಾ ಪ್ರಯಾಣಿಸಿದ್ದೇನೆ.

ಸೊರಬದಿಂದಲೇ ಹೊರಡುವ ರಾಜಹಂಸ ಶುರುವಾದ ಮೇಲೂ ಸೋನಿ ಬಸ್ಸಿಗೆ ಒಳ್ಳೇ ವ್ಯಾಪಾರ ಇತ್ತು. ಅದೇನಾಯಿತೊ ಗೊತ್ತಿಲ್ಲ, ಈಗ ಸುಮಾರು ಎರಡು ವರ್ಷದ ಕೆಳಗೆ ಸೋನಿ ಮಾಯವಾಯಿತು.

ಸೋನಿಯ ಜಾಗದಲ್ಲಿ ಇನ್ನೊಂದು ಬಂತು, ಬಾಲಾಜಿ ಅಂತ. ಅದೇ ನಂತರ ಸಿದ್ಧಗಂಗ ಎಂದಾಯಿತೊ ಏನೊ ಗೊತ್ತಿಲ್ಲ. ಅಂತು ಸ್ವಲ್ಪ ದಿನ ಸಿದ್ಧಗಂಗ ಅಂತ ಒಂದು ಪ್ರೈವೇಟ್ ಬಸ್ಸು ಸೊರಬ-ಬೆಂಗಳೂರು-ಸೊರಬ ಹೊಡೀತಿತ್ತು.

ಸುಮಾರು ಒಂದು ವರ್ಷವಾಗಿರಬೇಕು, ಮಹಾದೇವ ಅಂತ, ಹೊಸಾದು. ಇವರದ್ದು ಈಗ ಎರಡು ಬಸ್ಸುಗಳಿವೆ. ಒಂದು ೨+೨ ಮತ್ತೊಂದು ೨+೧. ನನ್ನ ಸದ್ಯದ default ಬಸ್ಸು ಕೂಡ ಇದೆ. ಒಂದು ಫೋನ್ ಮಾಡಿ ಬುಕ್ ಮಾಡಿದರಾಯಿತು. ಅರಾಮಾಗಿ ನಿದ್ರೆ ಮಾಡಿಕೊಂಡು ಹೋಗಬಹುದು.

ಮೊನ್ನೆ ಹೋಗುವಾಗ ಕೂಡ ಶುಕ್ರವಾರ ರಾತ್ರಿ ಮಹದೇವ ಬಸ್ಸಿಗೇ ಹೋದೆ. ಮರಳಿ ಬರಲು ಟಿಕೆಟ್ಟಿಗೆಂದು ಇನ್ನೂ ಹೇಳಿರಲಿಲ್ಲ. ಇನ್ನೇನು ಫೋನ್ ಮಾಡಬೇಕೆಂದುಕೊಳ್ಳುತ್ತಿರುವಾಗ ಅಪ್ಪ ಹೇಳಿದ. "ತಡಿ, ಮಹದೇವ ಬ್ಯಾಡ ಈ ಸರಿ. ಹೊಸ ಬಸ್ ಬಿಟ್ಟಿದ್ದ. ಸ್ಲೀಪಿಂಗ್ ಕೋಚ್ ಬೇರೆ ಇದ್ದಡ ನೋಡ್ಲಕ್ಕಡ".

ಸರಿ ಎಂದು ಹೊಸ ಸ್ಲೀಪರ್ ಬಸ್ಸಿನಲ್ಲೇ ಟಿಕೇಟ್ ಬುಕ್ ಮಾಡಿಸಿಯಾಯಿತು. ಅದೇ ಪರ್ವತ್ ಟ್ರಾವೆಲ್ಸ್!! ಸರಿ, ಬಸ್ಸು ಹೊರಡುವುದು ರಾತ್ರಿ ೯:೧೫ಕ್ಕೆ. ಸಂಜೆ ಬಸ್ಸಿನ ಏಜೆಂಟು ಮನೆಗೇ ಫೋನ್ ಮಾಡಿ ಬುಕ್ಕಿಂಗ್ ಖಾತ್ರಿ ಮಾಡಿಕೊಂಡಿದ್ದ. ಅದರಿಂದಲೇ ನಾನು ಹೊಸ ಬಸ್ಸಿನ ಗ್ರಾಹಕ ಸೇವೆಯನ್ನು ಮೆಚ್ಚಿಕೊಂಡುಬಿಟ್ಟಿದ್ದೆ! (ಗ್ರಾಹಕನಾಗುವ ಮೊದಲೆ).
ನಾನು ಸಂಜೆ ಗಿಣ್ಣಾಲು ಕುಡಿದು, ಲೈಟಾಗಿ ೨ ಚಪಾತಿ ತಿಂದು ಮನೆಯಿಂದ ಹೊರಟೆ. ಎಂದಿನಂತೆ ಅಪ್ಪನ ಜೊತೆ ಕಾರಿನಲ್ಲಿ ಸೊರಬಕ್ಕೆ ಬಂದೆ.
ಪೈ ಅಂಗಡಿ ಎದುರಿಗೇ ನಿಂತಿದ್ದ ಪರ್ವತ್ ಬಸ್ಸು ಸ್ವಲ್ಪ ಹೆಚ್ಚಿಗೆ ಎತ್ತರವಿದ್ದಂತೆ ಕಾಣುತ್ತಿತ್ತು. ಭಾನುವಾರ ರಾತ್ರಿ ಎಲ್ಲ ಕಡೆಯಿಂದ ಬೆಂಗಳೂರಿಗೆ ಹೊರಡುವವರು ಜಾಸ್ತಿ. ಅದಕ್ಕೆ ಸೊರಬವೇನು ಹೊರತಾಗಿಲ್ಲ. ಹಾಗಾಗಿಯೇ ಬೇಗ ಮಲಗಿಬಿಡುವ ಸೊರಬ ಪೇಟೆಯಲ್ಲಿ ಹತ್ತಿಪ್ಪತ್ತು ತಲೆಗಳನ್ನು ನೋಡಬಹುದಿತ್ತು. ಬಸ್ಸಿನ ಬಾಗಿಲ ಬಳಿ ಹೋಗಿ ನಿಂತವನೆ ಏಜೆಂಟಿಗಾಗಿ ಹುಡುಕತೊಡಗಿದೆ. ಅವನು ಅಲ್ಲೇ ಕೆಳಗಡೆ ಯಾರಿಗೋ ಟಿಕೆಟ್ ಹರಿಯುತ್ತಿದ್ದ. ನಂಗಿನ್ನು ಸೀಟ್ ನಂಬರ್ ಕೊಟ್ಟಿರದ್ದರಿಂದ ಅವನಿಗೆ ಕಾಯಬೇಕಾಯಿತು. ಕೈಯ್ಯಲ್ಲೊಂದು ಕ್ಲಿಪ್ಪಾಕಿದ್ದ ರಟ್ಟು(pad) ಹಿಡಿದುಕೊಂಡು ಅವ ಬಂದ.

"ಸ್ಲೀಪಿಂಗ್ ಅಲ್ವ ನೀವು? U3 ತಗೊಳ್ಳಿ ಸಾರ್" ಎಂದವನೆ ಚಂದದೊಂದು ಟಿಕೆಟ್ಟಿನ ಮೇಲೆ ಎನೋ ಗೀಚಿ, ಹರಿದು ನನ್ನ ಕೈಗಿತ್ತ. ಪ್ರಯಾಣದ ದಿನಾಂಕ ಮತ್ತು ಸೀಟ್ ನಂಬರ್ ಮಾತ್ರ ನಾನು ಸರಿಯಾಗಿ ನೋಡಿಕೊಂಡು ನಿಧಾನವಾಗಿ ಬಸ್ ಹತ್ತಿದೆ. ಒಳ್ಳೆ ಗಂ ಅಂತ ಅಗರಬತ್ತಿ ಮತ್ತು ಮಲ್ಲಿಗೆಯ ಮಿಶ್ರ ಪರಿಮಳ. ಒಳಗಿಂದ ಗ್ಲಾಸನ್ನು ತಿಕ್ಕಿ ಒರೆಸುತ್ತಿದ್ದ ಚಾಲಕನ ಮುಗುಳ್ನಗೆಯ ಸ್ವಾಗತ. ಚಾಲಕನನ್ನು ಹಾಗೇ ದಾಟಿ ಒಳನಡೆದೆ.

ನೀಟಾಗಿ ಗುಡಿಸಿಟ್ಟ ಬಸ್ಸು. ಒಳಗೆ ಹೋಗುತ್ತಿದ್ದಂತೆ ಎಡಗಡೆ ಸಾಲಿಗೆರಡರಂತೆ ಐದಾರು ಸಾಲು ಸುಖಾಸನಗಳು. ಅದರ ಮೇಲೆ ನಿದ್ರಾಸನಗಳು/ಹಾಸಿಗೆಗಳು. ಬಲಗಡೆಯಲ್ಲಿ, ಕೆಳಗೆ ಹಾಗು ಮೇಲೆ ಎರಡೂ ಕಡೆ ಮಲಗಿ ಪ್ರಯಾಣಿಸುವ ವ್ಯವಸ್ಥೆ. ಮೇಲಿನಿಂದ ಶಿಸ್ತಾಗಿ ಜೋತುಬಿಟ್ಟಿದ್ದ ತಿಳಿಬಣ್ಣದ ಹೂವಿನ ಚಿತ್ರದ ಪರದೆಗಳು ಕೆಂಪು ಬಣ್ಣದ ಹಾಸಿಗೆಯನ್ನು ಮರೆಮಾಡುತ್ತಿದ್ದವು. ಮಧ್ಯದ ದಾರಿ ಮಾತ್ರ ಸ್ವಲ್ಪ ಸಣ್ಣದೆನಿಸಿತು.

ಎಡಗಡೆಯ ಪರದೆಯನ್ನೊಮ್ಮೆ ಸರಿಸಿ ನೋಡಿದೆ. ಏನಾಶ್ಚರ್ಯ್!! ಒಳ್ಳೆ ಅಗಲವಾದ ಹಾಸಿಗೆ. ಅಷ್ಟು ಅಗಲದ ಹಾಸಿಗೆಯನ್ನು ಬೇರಾವ ಬಸ್ಸಿನಲ್ಲು ನೋಡಿರಲಿಲ್ಲ. ಅದರ ಮೇಲೆ ಶುಭ್ರವಾದ ಕೆಂಪು ಮೇಲುಹೊದಿಕೆ. ತುದಿಯಲ್ಲೊಂದು ಕೆಂಪಂಗಿ ತೊಟ್ಟ ಪುಟ್ಟ ಬಿಳಿ ದಿಂಬು. ಇನ್ನೇನು ಬೇಕು?!

ಆದರೆ "U3" ಹುಡುಕಬೇಕಿತ್ತು. ಪ್ರಯತ್ನಪಟ್ಟೆ, ಸೋತೆ. ಏಜೆಂಟು ಅಷ್ಟೊತ್ತಿಗೆ ಬಸ್ ಹತ್ತಿ ಒಳಗೆ ಹಾಸಿಗೆ ಹತ್ತಿ ಕುಣಿಯುತ್ತಿದ್ದ ಚಿಕ್ಕ ಮಕ್ಕಳನ್ನು ಬೈದು ಕೆಳಗಿಳಿಸುತ್ತಿದ್ದ. ಸೀಟು ತೋರಿಸಿ ಎಂದೆ. ಬಂದು ಹುಡುಕಿದ, ಪಾಪ ಅವನಿಗೂ U3 ಸಿಗಲಿಲ್ಲ. "ತಾಳಿ ಸರ್, ಡ್ರೈವರ್ ಕೇಳನ ಹೊಸ ಬಸ್ಸು ಹಂಗಾಗಿ.. " ಎಂದು ಡ್ರೈವರ್ ಹತ್ರ ಹೋದ. ಡ್ರೈವರ್ ಬಂದು ಎಡಗಡೆಯ ಮೊದಲ ಹಾಸಿಗೆ ತೋರಿಸಿ ಹೋದ. ಆ ಹಾಸಿಗೆಯ ಬಳಿಯ label U6 ಅಂತ ಇತ್ತು! ನನಗೆ ಅಷ್ಟೊತ್ತಿಗಾಗಲೆ, ಇಲ್ಲೆನೊ ಎಡವಟ್ಟಾಗಿದೆ ಎಂದೆನಿಸತೊಡಗಿತ್ತು. ಅಷ್ಟರಲ್ಲಿ U6 ನ ಮಹಾನುಭಾವರು ಬಂದು ಹತ್ತಿ ಶಿಸ್ತಾಗಿ ಮಲಗಿಬಿಟ್ಟರು!

ಆಗಲೇ ನನಗೆ ಗೊತ್ತಾಗಿದ್ದು. ನಾನಂದುಕೊಂಡ ಸಾಕಷ್ಟು ಅಗಲವಾದ ಹಾಸಿಗೆ double seatಉ!! ಮತ್ತು ಈ ಮನುಷ್ಯ ಒಂದೇ ಟಿಕೆಟ್ ಬುಕ್ ಮಾಡಿದವರಿಗೆ ಖುಶಿಯಿಂದ double bedನಲ್ಲಿ ಒಂದನ್ನು ಕೊಟ್ಟು ಬಿಟ್ಟಿದ್ದ. ಅಂದರೆ, ಅವನ ಬುಕಿಂಗ್ ಪ್ರಕಾರ ಪ್ರಯಾಣಿಸಿದರೆ, ಅಪರಿಚಿತ ಪ್ರಯಾಣಿಕರ ಜೊತೆ ಹೆಚ್ಚೆಂದರೆ ಮೂರುವರೆ ನಾಲ್ಕಡಿ ಅಗಲವಿರುವ ಹಾಸಿಗೆಯಲ್ಲಿ ಮಲಗಿ ಪ್ರಯಾಣಿಸಬೇಕು.

ನನಗೆ ತುಂಬಾ ಅಸಮಾಧಾನವಾಗಿತ್ತು. ಬಸ್ಸು ಹೊರಡಬೇಕಾದ ಸಮಯ ದಾಟಿ ಆಗಲೇ ೧೦ ನಿಮಿಷವಾಗಿತ್ತು. ನನ್ನಂತೆಯೇ ಇನ್ನೊಬ್ಬರಿಗೂ ಆಗಿತ್ತು. ಅವರಾಗಲೇ ಏಜೆಂಟರ ಜೊತೆ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದರು.

ಅವರನ್ನು ಸಮಾಧಾನ ಮಾಡಲು ಏಜೆಂಟರ ಸರ್ವಪ್ರಯತ್ನ. ಸಮಸ್ಯೆ ಏನೆಂದರೆ ಇದೇ ಮೊದಲಬಾರಿಗೆ ಸ್ಲೀಪಿಂಗ್ ಬಸ್ಸೊಂದು ಅಲ್ಲಿ ಬಂದು ನಿಂತಿದೆ. ಅನನುಭವಿಯಾದ ಏಜೆಂಟನೊಬ್ಬ ಸೀಟು ಬುಕ್ಕು ಮಾಡಿದಂತೆ ಕೇಳಿದವರಿಗೆಲ್ಲ ಟಿಕೇಟು ಕೊಟ್ಟಿದ್ದಾನೆ. ಅಪರಿಚಿತರು ಸಾಯಲಿ, ಅಷ್ಟು ಸಣ್ಣ ಹಾಸಿಗೆಯಲ್ಲಿ ಗಂಡ ಹೆಂಡತಿ ಕೂಡ ಒಟ್ಟಿಗೆ ಪ್ರಯಾಣಿಸುವುದು ಕಷ್ಟ!! ಏಜೆಂಟು ಈ ಬಸ್ಸನ್ನು, ಬಸ್ಸಿನ ಸೀಟುಗಳನ್ನು ನೋಡುತ್ತಿರುವುದು ಇದೇ ಮೊದಲಬಾರಿ.

ಸರಿ, ತಪ್ಪಾಗಿದೆಯೆಂದು ಅವನಿಗೆ ಅರ್ಥವಾಗಿತ್ತು. ಅದನ್ನು ಅವನು ಒಪ್ಪಿಕೊಂಡೂ ಇದ್ದ. ಅಷ್ಟಾದರು ಕೆಲವರು ಕೂಗುವುದನ್ನು ನಿಲ್ಲಿಸಿರಲಿಲ್ಲ. ಅವರ ರಗಳೆಗಳನ್ನೆಲ್ಲಾ ಮುಗಿಸಿ ನನ್ನ ಬಳಿಗೆ ಬಂದ. ನಾನಂದೆ,
"ನೋಡಿ, ಆಗಿದ್ ಆಯ್ತು. ನಿಮ್ಗೆ ಗೊತ್ತಿಲ್ಲದೆ ಹೀಗೆ ಮಾಡಿದೀರ. ನನಗೆ ಸ್ಲೀಪಿಂಗ್ ಕೊಡೋದಾರೆ ಸಿಂಗಲ್ ಕೊಡಿ. ಇಲ್ಲ ಅಂದ್ರೆ ಕುತ್ಕೊಂಡ್ ಹೋಗೋಕ್ ಒಂದ್ ಸೀಟ್ ಕೊಡಿ. ಅದೂ ಆಗಲ್ಲ ಅಂದ್ರೆ ಹೇಳಿ, ಮುಂದೆ ಯೋಚ್ನೆ ಮಾಡ್ತೀನಿ".

ಸ್ಲೀಪಿಂಗ್’ನಲ್ಲಿ ಈಗ ಒಬ್ಬೊಬ್ಬರಿಗೆ ಕೊಟ್ಟಾಗಿತ್ತು. ಭಾನುವಾರವಾದ್ದರಿಂದ sittingಕೂಡ ಫುಲ್ಲಾಗಿತ್ತು. ಏಜೆಂಟ್ ತಲೆ ಕೆರೆದುಕೊಳ್ಳುತ್ತಾ ಸುಮ್ಮನೆ ನಿಂತಿದ್ದ. ನಾನಿನ್ನು ಟಿಕೆಟ್ಟಿನ ದುಡ್ಡು ಕೊಟ್ಟಿರಲಿಲ್ಲ. ಚಾಲಕನ ಹತ್ತಿರ ಮಾತಾಡುತ್ತಿದ್ದ ಬಸ್ಸಿನ ಮಾಲೀಕರು ಒಳಗೆ ಬಂದರು. ಸಾಗರದಲ್ಲಿ ಯಾವುದಾದರು adjust ಮಾಡಿಕೊಡುತ್ತೇನೆಂದು ಬಸ್ಸಿನ ಮಾಲೀಕರು ಭರವಸೆಯಿತ್ತರು. ಅವರ ಮಾತನ್ನು ನಂಬದೆ ನನಗೆ ಬೇರೆ ದಾರಿಯಿರಲಿಲ್ಲ.

ಏಜೆಂಟರು ದುಡ್ಡು ಲೆಕ್ಕಮಾಡಿ ಮಾಲೀಕರಿಗೆ ಕೊಟ್ಟು, ನನಗೆ ಏನಾದರು ವ್ಯವಸ್ಥೆಮಾಡಿ ಬೆಂಗಳೂರಿಗೆ ಕಳಿಸಬೇಕೆಂದು ಅವರಲ್ಲಿ ಕೇಳಿಕೊಂಡರು. ಮತ್ತು ನನ್ನತ್ತ ತಿರುಗಿ, "ಇದೊಂದ್ ಸರಿ ಅಡ್ಜಸ್ಟ್ ಮಾಡ್ಕಳಿ ಸರ್.. ಫಸ್ಟ್ ಟೈಮ್ ಅಲ್ವಾ.. ಹಂಗಾಗಿ.." ಎಂದು ನಗುವ ಪ್ರಯತ್ನ ಮಾಡುತ್ತಾ ಬಸ್ಸಿಳಿದು ಹೋದರು. ಬಸ್ಸು ಹೊರಡುತ್ತಿದ್ದ ಹಾಗೆ ನಾನು ಕೆಳಗಡೆಯ ಹಾಸಿಗೆಯ ಮೇಲೆ, ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತೆ. ನನ್ನ ಎದುರಿನ ಸೀಟಿನಲ್ಲಿ ಕುಳಿತಿದ್ದ ಬಸ್ ಮಾಲೀಕರು ಕಾಲಿನ ಮೇಲೆ ಕಾಲು ಮಾಡಿತ್ತಿದ್ದರು. ಅವರ ಮುಖ ನೋಡಿಯೇ ಹೇಳಬಹುದಿತ್ತು; ಎಲ್ಲೂ adjust ಆಗುತ್ತಿಲ್ಲವೆಂದು.

ಸರಿ, ನನ್ನ ಪಾಲಿನ ಪ್ರಯತ್ನ ಮಾಡೋಣವೆಂದು ಆದಿತ್ಯನಿಗೆ ಫೋನಾಯಿಸಿದೆ. ಹಿಂದಿನ ದಿನ ಕಲ್ಗಾರಲ್ಲಿ ಸಿಕ್ಕಾಗ ಒಂದು ಎಕ್ಸ್ಟ್ರಾ ಟಿಕೆಟ್ ಇದೆಯೆಂದು ಹೇಳಿದ್ದ. ಅದನ್ನು ಯಾರಿಗೊ ಕೊಟ್ಟಾಗಿಹೋಗಿತ್ತು. ಶ್ರೀಧರನಿಗೆ ಫೋನ್ ಮಾಡಿದೆ, ಪ್ರಯತ್ನಿಸುತ್ತೇನೆಂದ. ಸುಮ್ಮನೆ ಕುಳಿತಿರಲಾಗಲಿಲ್ಲ, ಮತ್ತೆ ಶ್ರೀಧರನಿಗೆ ಫೋನಾಯಿಸಿದೆ.
"ಹೋ ಹೋ, ತಗಂಬುಟಿದಿ. ನಮ್ ಬಸ್ಸೇ ಸೈ.. ಮಹಾರಾಜ.. ನೀ ಏನು ತಲೆ ಕೆಡ್’ಶ್ಗ್ಯಳಡ.. ಸೀದ ಬಂದ್ಬುಡು" ಅಂದ.

ಸಕ್ಕತ್ ಸಮಾಧಾನ.. ಟೆನ್ಶನ್ ಎಲ್ಲ ಕಮ್ಮಿ ಆಗಿ, ಮುಖದಲ್ಲೊಂದು ಮಂದಹಾಸ.. ಊಹೂಂ! ಸಂಪೂರ್ಣವಾಗಿ ಮೂಡಿರಲಿಲ್ಲ.. ಆ ಕಡೆಯಿಂದ ಶ್ರೀಧರ ಹೇಳುತ್ತಿದ್ದ.. "೧೦ ಗಂಟಿಗೆ ಬಿಡದು ಬಸ್ಸು.. ಎಲ್ಲಿದ್ದೆ ನೀನು?!"

ಹುಹ್!! ಅಗಳ ಹಾರಿ ಇಬ್ಬೆಟ್ ಬಿಟ್ಟಾಂಗಾತು ಅಂದುಕೊಂಡೆ.. ನಾನಾಗ ಇನ್ನು ಸೊರಬ ಬಿಟ್ಟಿದ್ದೆ ಅಷ್ಟೆ. ಆಗಲೇ ೯:೩೦ ಆಗ್ಯೋಗಿತ್ತು. ಏನು ಮಾಡುವುದೆಂದು ತೋಚದೆ ಚಾಲಕನ ಬಳಿ ಹೋಗಿ ಸ್ವಲ್ಪ ವೇಗವಾಗಿ ಓಡಿಸುವಂತೆ ಕೇಳಿಕೊಂಡರೆ ಅವನು ಹಾಳಾದ ರಸ್ತೆಯನ್ನು ಬೈಯ್ಯಲು ಶುರುಮಾಡಿದ.

ಏನಾದರಾಗಲಿ ಎಂದು ಶ್ರೀಧರನಿಗೆ ಫೋನ್ ಮಾಡಿ ನಾನು ಬರುವ ತನಕ ಕಾಯುವಂತೆ ಮಹಾರಾಜ ಬಸ್ಸಿನ ಚಾಲಕನ ಮನವೊಲಿಸುವುದೊಂದೇ ದಾರಿಯೆಂದೂ, ಅದನ್ನು ಹೇಗಾದರೂ ಮಾಡಲೇಬೇಕೆಂದೂ ಹೇಳಿದೆ. ಯಾಕೆಂದರೆ ಕೊನೆ ಕ್ಷಣದಲ್ಲಿ ಸಿಕ್ಕೊಂದು ಟಿಕೆಟ್ಟೂ ಹೋಗಿಬಿಟ್ಟರೆ ಮತ್ತೊಂದು ಟಿಕೆಟ್ ಸಿಗುವುದು ಕನಸೇ ಸೈ ಎಂದು ಚೆನ್ನಾಗಿ ಗೊತ್ತಿತ್ತು.

ಅಷ್ಟರಲ್ಲಿ ಸಿಗ್ನಲ್ ಹೋಗಿದ್ದರಿಂದ, ನಾನು ಮತ್ತು ಬಸ್ಸಿನ ಮಾಲೀಕರು ನಮ್ನಮ್ಮ ಫೋನುಗಳನ್ನು ಕಿಸೆಗಿಳಿಸಿ ಮಾತಿಗಿಳಿದೆವು. ಮೊದಲು ನಾನೇ ಪರಿಚಯ ಮಾಡಿಕೊಂಡೆ, ನಂತರ ಅವರು ತಮ್ಮ ಪರಿಚಯವನ್ನು ಹೇಳಿಕೊಂಡರು. ೧೮ ವರ್ಷ ಬೆಂಗಳೂರಿನಲ್ಲಿದ್ದವರು, ಕೆಲಸಕ್ಕೆ ವಿದಾಯ ಹೇಳಿ ಸಾಗರಕ್ಕೆ ಹೋಗಿ ಬಸ್ ಸರ್ವಿಸ್ ಪ್ರಾರಂಭಮಾಡಿದ ಕತೆ ಹೇಳ ತೊಡಗಿದರು.

ಬಹಳ ಆಸಕ್ತಿಯಿಂದ ಮಾತಾಡುತ್ತಾ ಕುಳಿತಿದ್ದರಿಂದ ದಾರಿ ಸಾಗಿದ್ದೇ ಗೊತ್ತಾಗಲಿಲ್ಲ. ಅವರ ಬ್ಯುಸಿನೆಸ್ಸಿನಲ್ಲಿನ ನೂರಾರು ಸಮಸ್ಯೆಗಳು, ಬೆಂಗಳೂರಿಗೆ ಹೋಗಿ ಬರುವವರ ಸಂಖ್ಯೆಯಲ್ಲಿ ಹೆಚ್ಚಳ, ಭಾನುವಾರ ಡಿಮ್ಯಾಂಡ್ ಹೇಗೆ ಹ್ಯಾಂಡಲ್ ಮಾಡುವುದು, ದುಬಾರಿ ಪರ್ಮಿಟ್ಟುಗಳು, ಏಜೆಂಟರು ಮತ್ತು ಚಾಲಕರಿಂದಾಗಬಹುದಾದ ಮೋಸ ಮತ್ತು ಅದನ್ನು ಕಂಡು ಹಿಡಿಯುವ ಮತ್ತು ತಡೆಗಟ್ಟುವ ವಿಧಾನಗಳು. ನಾನು ಶಿವಮೊಗ್ಗ-ಸಾಗರ ರೈಲಿನಿಂದಾಗುವ ಪರಿಣಾಮದ ಬಗ್ಗೆ ಮಾತನಾಡಿದೆ. ಒಟ್ಟಿನಲ್ಲಿ ಸುಮಾರು ೪೦ ನಿಮಿಷದ ಮಾತಿನಲ್ಲಿ ಬಹಳ ಆಸಕ್ತಿಕರ ವಿಷಯಗಳು ಹೊರಗೆಬಂದವು. ಮುಖ್ಯವಾಗಿ, ಸ್ಲೀಪರ್ ಕೋಚ್’ಗೆ ಹೊಸದಾಗಿ ಪರವಾನಗಿ ಕೊಡುವುದನ್ನು ನಿಲ್ಲಿಸಿರುವುದು, ಆಂಧ್ರ ಸರ್ಕಾರದ ತೀರ್ಮಾನ, ಅದರ ಹಿಂದಿನ ಘಟನೆ, ಅದರಲ್ಲಿನ adjustmentಗಳು.. hmm..

ಎಲ್ಲಕ್ಕಿಂತ ಸಂತೋಷದ ವಿಚಾರವೆಂದರೆ, ಅವರು ಅಂದು ರಾತ್ರಿ ಏಜೆಂಟರ ಅಚಾತುರ್ಯದಿಂದ ಸೊರಬದಿಂದ ಹೊರಟ ಪ್ರಯಾಣಿಕರಿಗಾದ ತೊಂದರೆಯಾದದ್ದನ್ನು ಒಪ್ಪಿಕೊಂಡಿದ್ದು. ತಪ್ಪಿನ ಒಂದಂಶವನ್ನೂ ಸಮರ್ತಿಸಿಕೊಳ್ಳಲು ಪ್ರಯತ್ನ ಮಾಡದೇ ಇದ್ದಿದ್ದು. ತಪ್ಪಿನ ಸಂಪೂರ್ಣ ಹೊಣೆಯನ್ನು ಹೊತ್ತುಕೊಂಡಿದ್ದು. ತಪ್ಪನ್ನು ತಿದ್ದಿಕೊಳ್ಳುವ ಭರವಸೆಕೊಟ್ಟಿದ್ದು ಮತ್ತು ಅದನ್ನು ಹೇಗೆ ನಿರ್ವಹಿಸುತ್ತಾರೆಂಬುದನ್ನು ನನಗೆ ಮನವರಿಕೆಯಾಗುವ ಮಟ್ಟಿಗೆ ವಿವರಿಸಿದ್ದು!

ಇತ್ಲಗೆ, ಸಿಗ್ನಲ್ ಸಿಗ್ತಿದ್ದಂಗೆ ಫೋನು.. ಎಲ್ಲಿದ್ದೆ? ಎಲ್ಲಿದ್ದೆ? ಟೈಮು ೧೦:೧೦.. ಸದ್ಯ, ಆ ಬಸ್ಸು ಇನ್ನು ಹೊರಟಿರಲಿಲ್ಲ. ಸಾಗರ ತಲುಪಲು ನನಗೆ ಇನ್ನೂ ಕನಿಷ್ಟ ೧೦ ನಿಮಿಷ ಬೇಕಿತ್ತು. ಹಾಗಾಗಿ ಬಿ.ಹೆಚ್. ರೋಡಿನಲ್ಲೇ ಇಳಿದುಕೊಳ್ಳಲು ಶ್ರೀಧರ ಹೇಳಿದ. ಅವರ ಬಸ್ಸು ಅಲ್ಲಿಗೆ ಬರಲು ಹೇಗೂ ೫ ನಿಮಿಷ ಬೇಕೇ ಬೇಕು.

ಅಂತೂ ಸುಮಾರು ೧೦:೩೦ರ ಸಮಯಕ್ಕೆ ಮಹಾರಾಜ ಬಸ್ಸು ಬಂದು ನಿಂತಾಗ, ಓಡಿ ಹತ್ತಿ ಎದುರಿಗೇ ನಿಂತಿದ್ದ ಶ್ರೀಧರನಿಗೊಂದು ದೊಡ್ಡ ಥ್ಯಾಂಕ್ಸ್ ಹೇಳಿದೆ. ಹೆಗಲ ಮೇಲಿನ ಭಾರ ಸೀಟಿಗಿಳಿಯುತ್ತಿದ್ದಂತೆ ಮನಸ್ಸಿನ ಭಾರವೆಲ್ಲ ಇಳಿದು ಹಗುರಾದೆ.

ಆದಿತ್ಯನ ತಮಾಷೆಯ ಮಾತುಗಳು, ನಗೆಯ ಹೊಳೆ, ಹಿಂದಿನ ಸಾಲಿನ ಜೋಕುಗಳು.. ಬಿದ್ದು ಬಿದ್ದು ನಕ್ಕಿದ್ದು, ನಕ್ಕು ನಕ್ಕು ಬಿದ್ದಿದ್ದು.. ಏನೇ ಆಗ್ಲಿ, ಸುರಕ್ಷಿತವಾಗಿ ಸೋಮವಾರ ಬೆಳಿಗ್ಗೆ ಬೆಂಗಳೂರಲ್ಲೆದ್ದೆ. ಒಂದು ನೆನಪಿನಲ್ಲುಳಿಯುವಂತಹ ರಾತ್ರಿ.

Monday, February 09, 2009

ಮುಂಚೆ ಮಾಡಿಕೊ ಧರ್ಮವ

ಗೋವಿಂದಾ ಹರಿ ಗೋವಿಂದಾ ಹರಿ ಗೋವಿಂದಾ ನಾರಾಯಣ
ಗೋವರ್ಧನ ಗಿರಿಯನೆತ್ತಿದ ಸ್ವಾಮಿ ನಮ್ಮನು ರಕ್ಷಿಸೊ ||ಪ||

ಮಂಚ ಬಾರದು ಮಡದಿ ಬಾರಳು ಕಂಚು ಕನ್ನಡಿ ಬಾರದು
ಸಂಚಿ ತುಂಬಿದ ಹಣವು ಬಾರದು ಮುಂಚೆ ಮಾಡಿಕೊ ಧರ್ಮವ ||೧||

ಅಣ್ಣ ಬಾರೆಂದು ತಮ್ಮ ಬಾರೆಂದು ಬಣ್ಣ ಭಾಷೆಲಿ ಕರೆವರು
ಎಣ್ಣೆ ತುಪ್ಪವ ಕಾಸಿ ಬಾಯೊಳು ಸಣ್ಣ ಧಾರೆಲಿ ಬಿಡುವರು ||೨||

ಮಕ್ಕಳುಂಟೆಂದು ಮರಿಗಳುಂಟೆಂದು ನೆಚ್ಚಬೇಡೆಲೆ ಜೀವವೆ
ಯಮನ ಧೂತರು ಬಂದು ಕರೆವಾಗ ಮಕ್ಕಳಿದ್ದರು ಬಾರರು ||೩||

ನೆಂಟರುಂಟೆಂದು ಇಷ್ಟರುಂಟೆಂದು ಹಿಗ್ಗಬೇಡೆಲೆ ಜೀವವೆ
ಕಳ್ಳತನದಲಿ ಯಮನರೊಯ್ವಾಗ ಯಾರು ಬಿಡಿಸುವರೆನ್ನನು? ||೪||

ಹಾಸು ದರ್ಭೆಯ ಸೂಸು ಶೇಡಿಯ ಶ್ವಾಸ ಮೇಲ್ಮುಖವಾಗಿದೆ
ಶೇಷಗಿರಿ ತಿಮ್ಮಪ್ಪನಾಯ್ಕನ ಬೇಸರಿಲ್ಲದೆ ಭಜಿಸಿರೊ ||೫||

-ಪುರಂದರ ದಾಸರು

Update: (13/02/2009)
ವಿ.ಸೂ: ಇದನ್ನು ನಾನು ಯಾವುದೇ ಮುದ್ರಿತ ಹೊತ್ತಿಗೆಯಿಂದ ತಂದಿದ್ದಲ್ಲ.
ಅವರಿವರ ಬಾಯಲ್ಲಿ ಕೇಳಿದ್ದನ್ನು, ನನಗೆ ನೆನಪಿದ್ದ ಹಾಗೆ ಬರೆದಿದ್ದೇನೆ. ಹಾಗಾಗಿ
ಇದು ಪುರಂದರ ದಾಸರ ರಚನೆಯೇ ಎಂಬ ಬಗ್ಗೆ ಅನುಮಾನವಿದೆ.
ಅನುಮಾನಕ್ಕೆ ಮುಖ್ಯ ಕಾರಣವೆಂದರೆ ದಾಸರ ರಚನೆಯಲ್ಲಿ ಕಾಣಬರುವ
’ಪುರಂದರ ವಿಠಲ’ ಇಲ್ಲೆಲ್ಲೂ ಇಲ್ಲ!
ಹುಡುಕಿದಾಗ ನನಗೆ ಇದೇ ರೀತಿಯ ಇನ್ನೊಂದು ರಚನೆ ಇಲ್ಲಿ ಸಿಕ್ಕಿತು.
ಅದರಲ್ಲಿರುವ ರಚನೆಗೂ ಹಾಗು ನಾನು ಬರೆದದ್ದಕ್ಕು ಬಹಳ ವ್ಯತ್ಯಾಸಗಳಿವೆ.

ನನ್ನ ಸದ್ಯದ ಪರಿಸ್ಥಿತಿಯಲ್ಲಿ ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುವುದು
ಸಾಧ್ಯವಿಲ್ಲವಾದ್ದರಿಂದ ಇಲ್ಲಿಗೇ ನಿಲ್ಲಿಸುತ್ತಿದ್ದೇನೆ.
ನಿಮ್ಮ ಬಳಿ ಈ ಬಗ್ಗೆ ಹೆಚ್ಚಿನ ಮಾಹಿತಿಯಿದ್ದರೆ ಹಂಚಿಕೊಳ್ಳಬಹುದು.