Wednesday, September 22, 2010

ಬೆಳದಿಂಗಳು

ಇಂದು ಕೂಡ ಆಕಾಶದಲ್ಲಿ ಅಂತದೇ ಬೆಳದಿಂಗಳಿದೆ. ಎಷ್ಟೊಂದು ಆಶ್ಚರ್ಯ ನೋಡು! ದಿನಾ ಅದೇ ಚಂದ್ರ, ಬೆಳದಿಂಗಳು ಮಾತ್ರ ಬೇರೆ ಬೇರೆ.. ಇಂದಿನದಂತೂ ಪಕ್ಕಾ ಅಂದಿನ ರಾತ್ರಿಯ ಬೆಳದಿಂಗಳಂತೆಯೇ ಇದೆ.

ಇದೇ, ಈಗತಾನೆ ಊಟಕ್ಕೆ ಮೊಸರು ತೆಗೆದುಕೊಂಡು ಅಂಗಡಿಯಿಂದ ಬರುವಾಗ ಬೆಳದಿಂಗಳಲ್ಲಿ ನನ್ನ ನೆರಳನ್ನೆ ನೋಡುತ್ತಾ ನಡೆದು ಬಂದೆ; ಅಂದಿನ ಹಾಗೆಯೆ. ಅದಕ್ಕೆ ನಿನ್ನ ನೆನಪಾಗುತ್ತಿರುವುದು.

ಸಾಮಾನ್ಯವಾಗಿ ಬೆಳದಿಂಗಳಿರುಳಲ್ಲಿ ನಾನು ನೋಡುವುದು ಚಂದ್ರನನ್ನ, ಮತ್ತು ಸುತ್ತಲಿನ ಪ್ರಕೃತಿಯನ್ನ. ಇವತ್ಯಾಕೋ..

ನಾಲ್ಕು ವರ್ಷವಾಯಿತಲ್ಲವೆ ಈಗ? ನಂಬಲಿಕ್ಕೇ ಆಗುವುದಿಲ್ಲ. ನೀನು ಕೊಟ್ಟ ಕೆಂಪು ಗುಲಾಬಿ ಹೂವು ಇನ್ನೂ ನನ್ನ ಪುಸ್ತಕದ ಕಪಾಟಿನಲ್ಲಿ ಬೆಚ್ಚಗೆ ಕುಳಿತಿದೆ! ನಿನಗೆ ಪಿಂಕು ಇಷ್ಟ ಅಂತ ನನಗೆ ಆ ಬಣ್ಣದ ಹೆಲ್ಮೆಟ್ ಕೊಡಿಸಲು ನೀನು ಹಠಹಿಡಿದು, ನಾವಿಬ್ಬರೂ ಸೇರಿ ಹುಡುಕಿ, ಎಲ್ಲೂ ಸಿಗದೆ ಕಡೆಗೆ ನೀ ಕೊಡಿಸಿದ್ದ ಕೆಂಪು ಬಣ್ಣದ ಹೆಲ್ಮೆಟ್ಟಿಗೆ ಮೊನ್ನೆ ಮೊನ್ನೆ ವಿಶ್ರಾಂತಿ ಕೊಟ್ಟಿದ್ದೇನೆ! ನಿನಗೇ ಗೊತ್ತಲ್ಲ, ನೆನಪಿನಲ್ಲಿ ನಿನಗಿಂತ ನಾನು ಯಾವಾಗಲೂ ಹಿಂದೆ. ನಿನ್ನನ್ನು ಮರೆತಿದ್ದೇನೆಂದಲ್ಲ, ಮೊದಲಿನಷ್ಟು ನೆನಪು ಕಾಡುವುದಿಲ್ಲ ಅಷ್ಟೆ. ಅದಕ್ಕೇ ಸ್ವಲ್ಪ ಬರೆದುಬಿಡೋಣ ಎಂದು ಇದೆಲ್ಲ..

ಅಂದಹಾಗೆ, ಅವತ್ತು ನೀನು ಒಂತರಾ ಚೆನ್ನಾಗೇ ಕಾಣುತ್ತಿದ್ದೆ. ನಿನಗೆ ಹಾಗಂತ ಹೇಳಿದ್ದೆನೊ ಇಲ್ಲವೊ ನೆನಪಾಗುತ್ತಿಲ್ಲ. ಆದರೆ ಬೇರೆ ಯಾರ ಬಳಿಯೂ ಹೇಳಿಲ್ಲ, ನಕ್ಕಾರೆಂಬ ಭಯ! ಇನ್ನೊಂದು ವಿಷಯವನ್ನು ನಿನಗೆ ಆ ರಾತ್ರಿ ಹೇಳಿದ್ದೆ ನಾನು. ತುಂಬಾ ದಿನದಿಂದ ಹೇಳಬೇಕೆಂದು ಅಂದುಕೊಂಡು, ಹೇಳಲು ಧೈರ್ಯ ಸಾಲದೆ ಅಥವಾ ಅವಕಾಶ ಸಿಗದೆ ಉಳಿದು ಹೋಗಿದ್ದ ವಿಷಯವೇನೂ ಆಗಿರಲಿಲ್ಲ ಅದು. ಅಂದು, ಆ ಕ್ಷಣಕ್ಕೆ ಹೇಳಬೇಕೆಂದೆನಿಸಿದ್ದನ್ನು ಹೇಳಿಬಿಟ್ಟಿದ್ದೆ ಅಷ್ಟೆ. ನೀನು ಮಾತ್ರ ಎಂದಿನಂತೆಯೇ ಏನನ್ನೂ ಹೇಳದೆ ನನ್ನನ್ನೇ ನೋಡುತ್ತಿದ್ದೆ. ಅಥವಾ ನಾನು ಹಾಗೆ ಅಂದುಕೊಂಡಿದ್ದೆ.

ಅಂದು ಆ ಬೆಳದಿಂಗಳ ರಾತ್ರಿಯಲ್ಲಿ, ಹೆಸರೂ ಸರಿಯಾಗಿ ಗೊತ್ತಿರದಿದ್ದ ಊರಿನ ಗುಡ್ಡದ ಮೇಲೆ, ಅಲ್ಪಪರಿಚಿತರ ಮಧ್ಯೆ, ಅವರೆಲ್ಲರಿಗೆ ಅಪರಿಚಿತನಾದ ನಾನು ನಿನ್ನನ್ನು ಹಾಗೆ ನೋಡುತ್ತೇನೆ ಎಂದು ಅಂದುಕೊಂಡಿರಲಿಲ್ಲ.

ಹುಚ್ಚು ಬೆಳದಿಂಗಳು ನೋಡು! ಇಷ್ಟೆಲ್ಲ ಬರೆಸಿತು!

ಅಂದಹಾಗೆ ಬೇರೇನೂ ಬೇಸರವಿಲ್ಲ. ನಿನ್ನ ತಮ್ಮ ಸ್ವಲ್ಪ ಬೇಗ ಫೋನ್ ಮಾಡಿದ್ದರೆ ಆಸ್ಪತ್ರೆಗೇ ಬಂದು ನೋಡುತ್ತಿದ್ದೆ.

9 comments:

sunaath said...

Very Romantic!

Harish - ಹರೀಶ said...

ಎಂತಾತಡ ಅವ್ಳಿಗೆ?

ಶಾಂತಲಾ ಭಂಡಿ said...

ಸಂದೀಪ...
ಆ ಒಣಗೋಗಿದ್ ಗುಲಾಬಿ ಇಟ್ಗಂಡು ಕೊರಗದು ಬಿಡು ಸಾಕು. ಅಷ್ಟು ಒಳ್ಳೆ ಮಲ್ಲಿಗೆಮಾಲೆ ಇದ್ದಲಾ... ಸರ್ವಕಾಲಕ್ಕೂ ಸುವಾಸನೆ ಬೀರುವಂಥದ್ದು.

ನಿನ್ನ ನೋವಿಗೆ ಬೇಗ ಹುಷಾರಾಗ್ಲಿ.
ನೋವಲ್ಲೂ ಚೆನಾಗೇ ಬರದ್ದೆ.

ದಿವ್ಯಾ said...

wow !! ಚನಾಗಿ ಬರೆದಿದ್ದೀರಿ..ಇಷ್ಟ ಆಯಿತು... :-) ಬೆಳದಿಂಗಳು ನೆನಪುಗಳನ್ನು ಕೆದಕುತ್ತದೆ ಅಲ್ಲವೆ..nice ..

ಮನದಾಳದಿಂದ............ said...

ನೆನಪುಗಳು ನಿರತರ, ಚಿರಾಯು,
ಆದರೆ ನೆನಪಲ್ಲೆ ಕೊರಗುವುದು ಒಳ್ಳೆಯದಲ್ವಲ್ಲಾ....
ಕತೆಯಾದ್ರೆ, ಚಿಕ್ಕದಾಗಿ ಚೊಕ್ಕವಾಗಿ ಚೆನ್ನಾಗಿದೆ!

ಚರಿತಾ ಭಟ್ said...

ಒಮ್ಮೊಮ್ಮೆ ಬೆಳದಿಂಗಳೂ ಬಿಸಿಲಿನಂತೆ ಸುಡುತ್ತೆ.

Sandeepa Nadahalli said...

@sunaath,
Thanks a lot!

@Harish,
ಅರ್ಥಾಗ್ದೋರೆ ಬಿಟ್ಬುಡು. ಇನ್ನೂ ಸ್ಪಷ್ಟವಾಗಿ ನಾನು ಬರಿಯದಿಲ್ಲೆ ಆ ವಿಷಯನ. Thanks for the comment.

@ಶಾಂತಲಾ,
ಇದು ನೋವಲ್ಲ ಶಾಂತಲಾ,
ಬರೀ ನೋವಿನ ನೆನಪು ಮಾತ್ರ!

ಮಲ್ಲಿಗೆ ಮಾಲೆ of course ಇದ್ದು :-)
ಥ್ಯಾಂಕ್ಸ್!

@ದಿವ್ಯಾ,
ತುಂಬಾ ಧನ್ಯವಾದಗಳು :)

@ಮನದಾಳದಿಂದ,
ನೆನಪುಗಳು ಚಿರಾಯುವಾಗಬೇಕೆಂದೇನಿಲ್ಲ,
ನಾವು ಸಾಕಿದಂತೆ, ಬೆಳೆಸಿದಂತೆ ಬೆಳೆಯುತ್ತವೆ,
ಉಳಿಯುತ್ತವೆ ಅಷ್ಟೆ.

ಕೊರಗುವುದು ಖಂಡಿತಾ ಸಲ್ಲ!

ಧನ್ಯವಾದಗಳು:)

@ಚರಿತಾ,
ಹೌದು್. ಆದರೆ, ನಮ್ಮನ್ನು ನಾವು ಅದಕ್ಕೆಲ್ಲ ತೆರೆದುಕೊಂಡರೆ ಮಾತ್ರ!

ರಘುನಂದನ ಕೆ. ಹೆಗಡೆ said...

ಸಹಜವಾಗಬಹುದಾಗಿದ್ದ ಬರಹ ಕೊನೆಯ ವಾಕ್ಯದೊಂದಿಗೆ ವಿಶೇಷವಾಗಿ, ಸಹಜ ಬೆಳದಿಂಗಳು ನೆನಪುಗಳ ಕಾಡಿಸುವಂತೆ, ಇನ್ನೊಮ್ಮೆ Feel ಆಗುವಂತೆ ಮಾಡುತ್ತದೆ.

ಚಿಕ್ಕ ಚೆನ್ನ ಬರಹ...

Sandeepa Nadahalli said...

@ರಘುನಂದನ ಕೆ. ಹೆಗಡೆ,
ಧನ್ಯವಾದಗಳು :-)