Wednesday, October 27, 2010

ಜಾಣೆ ಕನ್ನಡವ ತಿಳಿದ್ಹೇಳೆ

ಒಗಟುಗಳು ಒಂತರಾ ಚಂದ. ಅದರಲ್ಲೂ ಅವು ಪದ್ಯಗಳ ರೂಪದಲ್ಲಿದ್ದರೆ, ಅದರ ಮಜವೇ ಬೇರೆ.
ಹೀಗೆ ಒಗಟುಗಳು ಹಾಗು ಪದ್ಯ ರೂಪದಲ್ಲಿರುವ ಪ್ರಶ್ನೋತ್ತರಗಳ ಕುರಿತು ಮಾತನಾಡುತ್ತಿದ್ದಾಗ ಅಮ್ಮ ಹೇಳಿದ ಒಂದು ಜೊತೆ ಪದ್ಯ ಇಲ್ಲಿದೆ.
(ಪ್ರ)
ನೀರಿಲ್ಲದ್ ಕೆರೆಯಲ್ಲಿ
ಬೇರಿಲ್ಲದ್ ಸಸಿ ಹುಟ್ಟಿ
ನಾರಿಲ್ಲದ್ ದಂಡೆ ಮಡುವಳು..
ನಾರಿಲ್ಲದ ದಂಡೆ ಮಡುವಳು
ಬೆಡಗಿನ ಜಾಣೆ ಕನ್ನಡವ ತಿಳಿದ್ಹೇಳೆ..

(ಉ)
ಕನ್ನಡವನು ಹೇಳುವಲೆ
ಇನ್ನು ಚೋದಿಗವಿಲ್ಲೆ
ಪನ್ನಗಧರನ ಶಿವಬಲ್ಲ
ಶಿವಬಲ್ಲ ಸೀತಾಳಿ ದಂಡ್ಯಲ್ಲವೇನೆ ಹಶಿಯವಳೆ...

ಇವು ಅಮ್ಮನ ಅಮ್ಮಮ್ಮ ಹೇಳುತ್ತಿದ್ದ ಹಾಡುಗಳಂತೆ. ಇಂತಹ ಹಳೆಯ ಪದ್ಯಗಳು ನಿಮಗೆ ಗೊತ್ತಿದ್ದರೆ, ನನಗೆ ತಿಳಿಸಿ ನನ್ನ ಕುತೂಹಲ ತಣಿಸಿ.

ವಿ.ಸೂ: ಬಾಯಿಂದ ಬಾಯಿಗೆ ಜಾನಪದ ಶೈಲಿಯಲ್ಲಿ ದಾಟಿ ಬಂದ ಈ ಪದ್ಯಗಳಲ್ಲಿ ಕೆಲವು ದೋಷಗಳಿರಬಹುದು. ನಾನು ಕೇಳಿದ್ದನ್ನು ಹಾಗೆಯೇ ಬರೆದಿದ್ದೇನೆ ಅಷ್ಟೆ.

4 comments:

sunaath said...

ನಡಹಳ್ಳಿಯವರೆ,
ಪದ್ಯರೂಪದ ಈ ಸೊಗಸಾದ ಒಗಟನ್ನು ಕೇಳಿರಲಿಲ್ಲ. ಇಲ್ಲಿ ನೀಡಿದ್ದಕ್ಕಾಗಿ ಧನ್ಯವಾದಗಳು.

Karthik H.K said...

ನನ್ನ ಬಳಿ ಇಂಥದ್ದೇ ಒಂದು ಹಳೆಯ ಒಗಟಿದೆ...

ಹರನ ಹಾರನ ಆಹಾರನ ಸಖನ ಸುತನ ಒಡೆಯನ ವೈರಿಯ ಹೆಂಡತಿಯ ಹುಟ್ಹೆಸರೇನೆ?

ಉತ್ತರ ಹುಡುಕಿ ನೋಡೋಣ.. :)

Sandeepa Nadahalli said...

@sunaath,
ಖುಷಿ :-)

@Karthik,
ನೀವು ಹೇಳಿದ ಒಗಟಿನ ಬಗ್ಗೆ ಯೋಚನೆ ಮಾಡಿದೆ. ಅರ್ಧಕ್ಕಿಂತ ಮುಂದೆ ಹೋಗಲಾಗಲಿಲ್ಲ. ನೀವು ಈ ಒಗಟನ್ನು ಬಿಡಿಸಿದ್ದೀರ?

ನೀವು ಹೇಳಿದ್ದಕ್ಕೆ ಹೋಲುವ ಒಂದು ಒಗಟು ನನಗೆ ಗೊತ್ತಿದೆ. ಅದು ಹೀಗಿದೆ:
"ಹರನ ಹಾರನ ಆಹಾರನ ಸುತನ ಒಡೆಯನ ವೈರಿಯ ತಮ್ಮನ ಮಡದಿಯ ಹೆಸರೇನು?"

singh from callezee said...

Nice one enjoyed reading your blog