Tuesday, May 03, 2011

ನಾಗರಾಜಣ್ಣ

ಪಂ..ಪಾಂss.. ಪ.. ಪಪ್ಪಾಂsಪಂ..

ಸೊರಬದ ರಂಗನಾಥ ದೇವಸ್ಥಾನದ ಬಳಿ ಬಸ್ಸಿಗೆ ಕಾಯುತ್ತ ನಿಂತ ಶಾಲೆ ಮಕ್ಕಳ ಕಿವಿಗೆ ಈ ಹಾರ್ನ್ ಕೇಳಿತೆಂದರೆ, ಅದು ಸೆಕೆಂಡ್ ಅಂಬಾರಗೋಡ್ಲು ಬಸ್ಸೇ ಇರಬೇಕು. ಮತ್ತು ಡ್ರೈವರ್ ಬೇರಾರೂ ಆಗಿರುವುದು ಸಾಧ್ಯವೇ ಇರಲಿಲ್ಲ. ಅದು ನಮ್ಮೆಲ್ಲರ ಪ್ರೀತಿಯ ನಾಗರಾಜಣ್ಣನೇ ಇರಬೇಕು. ಯಾಕೆಂದರೆ, ಮತ್ಯಾವ ಡ್ರೈವರ್ರೂ ಆ ರೀತಿಯ ಹಾರ್ನ್ ಮಾಡುತ್ತಿರಲಿಲ್ಲ.

ನಾಗರಾಜಣ್ಣನ ಕಪ್ಪು ಗಡ್ಡ, ಅವನ ಕನ್ನಡಕ ಮತ್ತು ಜೇಬಿನಲ್ಲಿನ ರೆನಾಲ್ಡ್ಸ ಪೆನ್ನುಗಳ ಹಾಗೆ, ಆ ವಿಶಿಷ್ಟ ಹಾರ್ನ್ ರಾಗ ಅವನ ವ್ಯಕ್ತಿತ್ವದ ಭಾಗವೇ ಆಗಿಹೋಗಿತ್ತು.

ಈ ನಾಗರಾಜಣ್ಣನ ಪರಿಚಯ ನಮಗಾಗಿದ್ದು ಸುಮಾರು ೧೯೯೨-೯೩ರಲ್ಲಿ. ನಾನಾಗ ೫ನೇ ತರಗತಿಯಲ್ಲಿ ಓದುತ್ತಿದ್ದೆ. ಸೊರಬಕ್ಕೆ ಹೊಸಬಾಳೆ ಮಾರ್ಗದ ಊರುಗಳಿಂದ ಶಾಲೆಗೆ ಬರುವವರು ನಾವು ಸುಮಾರು ಮಕ್ಕಳಿದ್ದೆವು. ನಡಹಳ್ಳಿಯಿಂದ ನಾನು, ಅಕ್ಕ, ನಿರ್ಮಲಕ್ಕ, ಕಾಸರಗುಪ್ಪೆಯಿಂದ ಸುಧೀರ ಮತ್ತು ಶಿವಕುಮಾರ ಹಾಗು ಹೊಸಬಾಳೆಯಿಂದ ಒಂದಿಬ್ಬರು. ಗಜಾನನ ಬಸ್ಸಿಗೆ ಪಾಸ್ ಮಾಡಿಸಿಕೊಂಡಿದ್ದ ನಾವೆಲ್ಲ ಒಂದೇ ಗುಂಪಿನಲ್ಲಿ ಬಸ್ಸು ಕಾಯುವುದು, ಒಟ್ಟಿಗೇ ಬಸ್ಸಿನಲ್ಲಿ ಪ್ರಯಾಣಿಸುವುದು, ಪರಸ್ಪರ ಸೀಟು ಹಿಡಿದುಕೊಳ್ಳುವುದು, ಎಲ್ಲಾ ಸಾಮಾನ್ಯವಾಗಿತ್ತು.

ಬೆಳಿಗ್ಗೆ ಹತ್ತಕ್ಕೆ ಸ್ವಲ್ಪ ಮುಂಚೆ ಪೇಟೆ ತಲುಪಿಸುವ ಸೆಕೆಂಡ್ ಅಂಬಾರಗೋಡ್ಲು. ಹುಶಾರಿಲ್ಲದೆ ರಜ ಹಾಕಿದ್ದ ಮರುದಿನ ಸ್ವಲ್ಪ ಮುಂಚೆ ಹೋಗಿ ಹೋಮ್’ವರ್ಕ್ ಮಾಡಬೇಕಾಗಿ ಬಂದಲ್ಲಿ ಎಂಟೂವರೆಯ ಪಾಳ, ಇಲ್ಲ ಅದರ ಹಿಂದೆಯೇ ಬರುವ ಗುರುರೇಣುಕ. ಅದೂ ತಪ್ಪಿದಲ್ಲಿ ಒಂಬತ್ತರ ಫಸ್ಟ್ ಅಂಬಾರಗೋಡ್ಲು ಬಸ್ಸು. ಸಂಜೆ ಐದಕ್ಕೆ ಸರಿಯಾಗಿ ಸೆಕೆಂಡ್ ಅಂಬಾರಗೋಡ್ಲು. ಸ್ಪೋರ್ಟ್ಸ್ ಇದ್ದಾಗ, ಸ್ಪೆಶಲ್ ಕ್ಲಾಸ್ ಇದ್ದ ದಿನ ಅಥವಾ ಇನ್ಯಾವುದೇ ಕಾರಣಕ್ಕೆ ಅಂಬಾರಗೋಡ್ಲು ತಪ್ಪಿಹೋದರೆ, ಆರು ಗಂಟೆಯ ಬನ್ವಾಸಿ ಗಜಾನ್ನ.

ಶನಿವಾರದ ಮಾರ್ನಿಂಗ್ ಕ್ಲಾಸಿಗೆ ಹೋಗಲು ಬೆಳಿಗ್ಗೆ ಬನ್ವಾಸಿ ಗಜಾನ್ನ. ವಾಪಸ್ ಹೋಗಕೆ ಬೇಗ  ಬಿಟ್ರೆ ಕೃಷ್ಣ, ತಪ್ಪಿದ್ರೆ ಉಕ್ಕಡಗಾತ್ರಿ.

ಈ ರೀತಿಯಾಗಿ ಶಾಲೆಯ ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯವಿದ್ದರಿಂದ ಶಾಲೆಗೆ ಹೋಗಿ ಬರುವುದು ಒಂದು ಸಮಸ್ಯೆಯೇ ಆಗಿರಲಿಲ್ಲ; ಮಂಗಳವಾರ ಒಂದನ್ನು ಬಿಟ್ಟು!

ಮಂಗಳವಾರ ಸೊರಬದಲ್ಲಿ ಸಂತೆ. ಬೆಳಿಗ್ಗೆಯಿಂದಲೇ ಪೇಟೆಗೆ ಬರುವ ಬಸ್ಸುಗಳೆಲ್ಲ ರಶ್ಶೋ ರಶ್ಶು.. ಕೆಲವು ಬಸ್ಸುಗಳು ಎಷ್ಟು ತುಂಬಿರುತ್ತಿದ್ದವೆಂದರೆ ನಡಹಳ್ಳಿಯಲ್ಲೆಲ್ಲ ಕೈ ಮಾಡಿದರೂ ನಿಲ್ಲಿಸುತ್ತಿರಲಿಲ್ಲ. ಹೀಗೆ ಬಸ್ಸುಗಳ ತುಂಬಾ ಬಂದಿಳಿದ ಜನರು ಸಂತೆ ಮುಗಿಸಿ, ಕೈಗಳಲ್ಲಿ ಒಂದೊಂದು ಕೈಚೀಲ ಹಿಡಿದು, (ಮತ್ತೆ ಕೆಲವರು ಮೂಟೆ ಹೊತ್ತು) ಮರಳಿ ಹೊರಟರೆ, ಸಂಜೆ ಪೇಟೆಯಿಂದ ಹೊರಡುವ ಬಸ್ಸುಗಳ ಪರಿಸ್ಥಿತಿಯನ್ನು ನೀವೇ ಊಹಿಸಿ.

ಸಂತೆಯದಿನ ನೂಕುನುಗ್ಗಲಿನಲ್ಲಿ, ಚಿಮಣಿ ಎಣ್ಣೆ ಮತ್ತು ಒಣ ಮೀನಿನ ಹಸಿ ವಾಸನೆಯ ನಡುವೆ, ನಮ್ಮ ಪಾಟೀಚೀಲಗಳನ್ನು ಹೊತ್ತುಕೊಂಡು ಬಸ್ಸು ಹತ್ತುವುದು ಬಹಳ ಕಷ್ಟವಾಗುತ್ತಿತ್ತು.

ಆಗ ನಮ್ಮ ನೆರವಿಗೆ ಬಂದಿದ್ದು ಡ್ರೈವರ್ ನಾಗರಾಜಣ್ಣ. ಅವನ ಕೃಪೆಯಿಂದ ಶಾಲಾ ಮಕ್ಕಳ ಮಂಗಳವಾರದ ಗೋಳು ಕೊನೆಗೊಂಡಿತು. ಮಕ್ಕಳಿಗೆಲ್ಲ ಮಂಗಳವಾರ ಸ್ಪೆಶಲ್ ಪಾಸು! ಹಿಂದಿನ ಬಾಗಿಲಿನಲ್ಲಿ ಎಲ್ಲರ ಜೊತೆ ನುಗ್ಗಿ ಹತ್ತಿ, ಅವರಿವರ ಕೈಕಾಲಿಗೆ ಸಿಕ್ಕಿ, ಬೈಸಿಕೊಂಡು ಒದ್ದಾಡುವುದೆಲ್ಲ ಇತಿಹಾಸವಾಗುವ ಕಾಲ ಬಂತು.

ನಮಗೆಲ್ಲ ಡ್ರೈವರ್ ಬಾಗಿಲಿನಲ್ಲಿ ಬಸ್ ಹತ್ತುವ ಯೋಗ ಬಂತು. ನಮ್ಮ ಬಸ್ಸಿನಲ್ಲಿ, ಡ್ರೈವರ್ ಬಾಗಿಲಿನ ಕೆಳಗೆ,(ಸ್ವಲ್ಪ ಬದಿಗೆ) ಬಸ್ಸಿನ ಬಾಡಿಯನ್ನೇ ಕೊಯ್ದು ಪಾದ ಹಿಡಿಸುವಷ್ಟು ಗಾತ್ರದ ಒಂದು ಕಂಡಿ ಮಾಡಿದ್ದರು. ಅದೇ ನಮ್ಮ ಮೆಟ್ಟಿಲು. ಈಗೆಲ್ಲ ಅದು ಸಾಮಾನ್ಯ. ಎಲ್ಲಾ ಬಸ್ಸುಗಳಲ್ಲೂ ಡ್ರೈವರ್ಗಳಿಗೆ ಹತ್ತಲು ಮೆಟ್ಟಿಲಿರುತ್ತದೆ. ನಾ ಕಂಡಂತೆ ಆಗೆಲ್ಲ ಹೆಚ್ಚಿನ ಚಾಲಕರು ಮುಂದಿನ ಗಾಲಿಯ ಮೇಲೆ ಕಾಲೂರಿ, ಎತ್ತರದ ಹಿಡಿಕೆಯನ್ನು ಹಿಡಿದು ಜಿಗಿದು ಬಸ್ಸು ಹತ್ತುತ್ತಿದ್ದರು.

ಆ ಮೆಟ್ಟಿಲಿನ ಮೇಲೆ ಒಂದು ಕಾಲೂರಿ, ಮತ್ತೊಂದು ಕಾಲನ್ನು ಗಾಲಿಯ ಮೇಲೂರಿ ಒಬ್ಬೊಬ್ಬರಾಗಿ ಬಸ್ಸೇರುತ್ತಿದ್ದೆವು. ನಾಗರಾಜಣ್ಣ ಸೀಟಿನಲ್ಲಿದ್ದರೆ ಕೈ ಹಿಡಿದು ಮೇಲೆ ಎಳೆದುಕೊಳ್ಳುತ್ತಿದ್ದ. ಮೊದಲು ಹುಡುಗಿಯರು ಹತ್ತುತ್ತಿದ್ದರು. ಅವರೆಲ್ಲ ಇಂಜಿನ್ನಿನ ಸುತ್ತ ಮುತ್ತ ಸೆಟ್ಲ್ ಆಗುತ್ತಿದ್ದರು. ಎಲ್ಲರ ಪಾಟೀಚೀಲವನ್ನು ತೆಗೆದುಕೊಂಡು ಇಂಜಿನ್ನಿನ ಮೇಲೆ, ಅಲ್ಲಿ ಜಾಗ ಸಾಕಾಗದಿದ್ದರೆ ಮುಂದೆ ಗಾಜಿನ ಬಳಿಯಿದ್ದ ಜಾಗದಲ್ಲಿ ಸರಿಯುವುದು ಶಿವುನ ಕೆಲಸ.

ಹೀಗೆ ಇಂಜಿನ್ನಿನ ಮೇಲೆ, ಸುತ್ತಲೂ ಕಾಲು ಇಳಿ ಬಿಟ್ಟುಕೊಂಡು ಮೂರ್ನಾಲ್ಕು ಜನ, ಇಂಜಿನ್ನಿನ ಸುತ್ತ ಹಾಕಿದ ಬೇಲಿಯ ಸರಳಿನ  ಮೇಲೆ ಮತ್ತಿಬ್ಬರು. ಗೇರ್ ಲಿವರ್ರಿನ ಬಳಿ ಇನ್ನೊಬ್ಬ. ಮತ್ತಿಬ್ಬರು ಡ್ರೈವರ್ ಸೀಟಿನ ಹಿಂದುಗಡೆ. ಮಗದೊಬ್ಬ ನಾಗರಾಜಣ್ಣನ ಬಲಗಡೆ! ಕೊನೆಯಲ್ಲಿ ಹೇಳಿದ, ಡ್ರೈವರ್ ಸೀಟಿನ ಬಲಗಡೆಯ ಜಾಗಕ್ಕೆ ತುಂಬಾ ಬೇಡಿಕೆ. ಯಾಕೆಂದರೆ, ಅಲ್ಲಿ ನಿಂತರೆ ಮಾತ್ರ ಹಾರ್ನ್ ಕೈಗೆ ಸಿಕ್ಕುತ್ತಿದ್ದದ್ದು! ಹಾಗಾಗಿ, ಆ ಸಂದಿಯಲ್ಲಿ ಯಾವಾಗಲೂ ಕನಿಷ್ಟ ಇಬ್ಬರು ಹುಡುಗರು ಇದ್ದೇ ಇರುತ್ತಿದ್ದರು.

ನಾನು ಆ ಸಂದಿಯಲ್ಲಿ ನಿಂತುಕೊಂಡು, ನಡುಗುವ ಕೈಗಳಿಂದ ಮೊದಲನೇ ಬಾರಿ ಹಾರ್ನ್ ಮಾಡಿದ್ದು ಇನ್ನೂ ಚೆನ್ನಾಗಿ ನೆನಪಿದೆ.  ಆದರೆ ಆಗ ಮೈ ನಡುಗಿದ್ದು ಹಾರ್ನಿನ ಸೌಂಡಿಗೋ ಅಥವಾ ಗಾಬರಿ ಮಿಶ್ರಿತ ಖುಷಿಗೋ ಗೊತ್ತಿಲ್ಲ!

ಬಸ್ಸಿನ ಬಾಡಿಯ ಒಳಗಡೆಯ ಗೋಡೆಗೆ ಕ್ಲಾಂಪು ಹಾಕಿ ಜೋಡಿಸಿದ ಶುಂಠಿ ಗೆಡ್ಡೆಯಂತಹ ಲೋಹದ ಡಬ್ಬಿಯೇ ಹಾರ್ನಿನ ಸ್ವಿಚ್ಚು. ಕೆಳಗಡೆ ಎರಡು ಸಣ್ಣ  ಪಾರದರ್ಶಕ ಪೈಪುಗಳು. ಮೇಲ್ಬಾಗದಲ್ಲಿ ಸಿಕ್ಕಿಸಿದ ಕೊಡೆಕಡ್ಡಿಯಂತದ್ದೆ ಎರಡು ಕಡ್ಡಿಗಳು. ಆ ಕಡ್ಡಿಗಳ ತುದಿಗೆ ಪ್ಲಾಸ್ಟಿಕ್ ಕ್ಯಾಪು; ಒಂದು ಕೆಂಪು, ಒಂದು ನೀಲಿ.

ಆ ಹಾರ್ನಿನ ಮೇಲೆ ಲೀಲಾಜಾಲವಾಗಿ ಆಡುತ್ತಿದ್ದ ನಾಗರಾಜಣ್ಣನ ಬೆರಳುಗಳನ್ನು ಬೆರಗುಗಣ್ಣುಗಳಿಂದ ಸೂಕ್ಷ್ಮವಾಗಿ ಗಮನಿಸುತ್ತಿದ್ದ ನಮಗೆ, ಅವನ musical-hornನ್ನು ಕಾಪಿ ಮಾಡಲು ಬಹಳ ದಿನ ಹಿಡಿಯಲಿಲ್ಲ.

ಹಾರ್ನ್ ಯಾರೇ ಹಿಡಿದಿರಲಿ, ಎಲ್ಲಿ, ಎಷ್ಟು, ಹೇಗೆ ಹಾರ್ನ್ ಮಾಡಬೇಕೆಂದು ಹೇಳುವ ಅವಶ್ಯಕತೆಯೇ ಬರುತ್ತಿರಲಿಲ್ಲ. ಯಾವುದೋ ಮಾಯೆಯಲ್ಲಿ ನಾವು ಅದನ್ನೆಲ್ಲಾ ತಿಳಿದುಕೊಂಡುಬಿಟ್ಟಿದ್ದೆವು.

ರಂಗನಾಥ ದೇವಸ್ಥಾನ ಬಿಟ್ಟಮೇಲೆ ಭೂತನೇರಿಯ ತಿರುವಿನಲ್ಲಿ ಒಮ್ಮೆ ಮತ್ತು ದಂಡಾವತಿ ಸೇತುವೆ ದಾಟಿದ ಮೇಲೆ ಒಂದು ಫುಲ್ ಹಾರ್ನು. ಹೊಸಪೇಟೆ ಹಕ್ಕಲಿನ ಏರಿನಲ್ಲಿ ಒಂದು ಸಣ್ಣ ಪೀಂ.. ನಡಹಳ್ಳಿ ಹಾನಬ್ಬಿಯಲ್ಲಿ ಒಂದು ಫುಲ್ಲು.. ದನದ ಹಿಂಡು ಸಿಕ್ಕಾಗ ಮತ್ತೊಂದು ಹೀಗೆ..

ಹುಡುಗರ ಕೈಗೆ ಹಾರ್ನ್ ಕೊಟ್ಟು ನಿಶ್ಚಿಂತೆಯಿಂದ ಡ್ರೈವ್ ಮಾಡುತ್ತಿದ್ದ ನಾಗರಾಜಣ್ಣ ಯಾವಾಗಲು ನಮ್ಮೊಡನೆ ನಗುನಗುತ್ತಾ ಮಾತನಾಡುತ್ತಿದ್ದ. ಮೊದಮೊದಲು ಬರೀ ಘಟ್ಟದ ಕೆಳಗಿನ ಕನ್ನಡ ಮಾತನಾಡುತ್ತಿದ್ದವ ನಿಧಾನವಾಗಿ ನಮ್ಮ ಸೀಮೆಯ ಶಬ್ದಗಳನ್ನು ಉಪಯೋಗಿಸುವುದನ್ನು ಕಲಿತಿದ್ದ. ಆಗಾಗ ಹವ್ಯಕ ಬಾಷೆಯ ಮಾತುಗಳನ್ನೂ ಪ್ರಯತ್ನಿಸಿದ್ದಿದೆ.

ರಕ್ಷಾ ಬಂಧನದ ಸಮಯದಲ್ಲಿ ಅವನ ಕೈ ಮೊಳಕೈವರೆಗೂ ರಾಕಿಗಳಿಂದ ತುಂಬಿಹೋಗಿರುತ್ತಿತ್ತು. ಅದನ್ನು ನೋಡಿಯೇ ಅವನ ಜನಪ್ರಿಯತೆಯನ್ನು ಊಹಿಸಬಹುದಿತ್ತು.
ನನಗೆ ಇನ್ನೊಂದು ಪ್ರೀತಿಯ ವಿಷಯವೆಂದರೆ, ಅವನು ಆಗಾಗ ನಮಗೆಲ್ಲ ಮಹಾ ಲ್ಯಾಕ್ಟೊ, ಲ್ಯಾಕ್ಟೋ ಕಿಂಗು, ಕಾಫೀ ಬೈಟು ಇತ್ಯಾದಿ ಚಾಕಲೇಟುಗಳನ್ನು ಕೊಡಿಸುತ್ತಿದ್ದುದು. ಅಷ್ಟೇ ಅಲ್ಲ, ರಾಕಿ ಕಟ್ಟಿದ ಹೆಣ್ಣುಮಕ್ಕಳಿಗೆ ಅವನು ಬಳೆಗಳನ್ನು ಕೊಡಿಸಿದ್ದೂ ಇದೆ.

ಸದಾ ಹಸನ್ಮುಖಿಯೂ, ಸಹೃದಯಿಯೂ ಆದ ಡ್ರೈವರ್ ನಾಗರಾಜಣ್ಣನನ್ನು ಹೈಸ್ಕೂಲು ಮುಗಿದ ಮೇಲೆ ಮತ್ತೆ ನೋಡಿದ್ದೇ ಇಲ್ಲ. ಮುಂದಿನ ಡಿಪ್ಲೋಮ ದಿನಗಳಲ್ಲಿ ಕಾಲೇಜಿಗೆ ಸೈಕಲ್ ಹೊಡೆದಿದ್ದೇ ಹೆಚ್ಚು. ಬಸ್ಸಿಗೆ ಹೋದರೂ, ಸರಿಯಾದ ಹೊತ್ತು ಗೊತ್ತು ಇರಲಿಲ್ಲ. ಹಾಗಾಗಿ ಇನ್ಯಾವುದೇ ಡ್ರೈವರ್ರು ನಾಗರಾಜಣ್ಣನಷ್ಟು ಇಷ್ಟವಾಗಲೇ ಇಲ್ಲ.

ನಂತರ ಇಂಜಿನಿಯರಿಂಗ್ ಓದಲೆಂದು ಊರುಬಿಟ್ಟು ದಾವಣಗೆರೆಗೆ ಹೋದಮೇಲೆ ಊರುಬದಿಯ ಡ್ರೈವರ್ರು, ಕಂಡಕ್ಟರು, ಏಜೆಂಟರುಗಳ ಹೆಸರೇ ಮರೆತುಹೋಗತೊಡಗಿತು.

ಆದರೆ ನಾಗರಾಜಣ್ಣನ ವಿಷಯದಲ್ಲಿ ಹಾಗಲ್ಲ!
ಅವನ್ನ ಹಾಗೆಲ್ಲ ಮರೆಯೋಕೆ ಆಗಲ್ಲ!

ಪಂ..ಪಾಂss.. ಪ.. ಪಪ್ಪಾಂsಪಂ..

ವಿ.ಸೂ:
  • ಕೃಷ್ಣ, ಉಕ್ಕಡಗಾತ್ರಿ, ಅಂಬಾರಗೋಡ್ಲು ಇತ್ಯಾದಿಗಳೆಲ್ಲ ಬಸ್ಸುಗಳ ಹೆಸರುಗಳು. ಅವು ಹೇಗೆ ಆಯಾ ಹೆಸರುಗಳನ್ನು ಪಡೆದುಕೊಂಡವೆಂದು ಇನ್ನೊಮ್ಮೆ ನೋಡೋಣ. ಗೆಳೆಯ ಸುಶ್ರುತನ ಎಮ್ಮೆಬಸ್ಸು ಎಂಬ ಪುಷ್ಪಕ ವಿಮಾನ ಎಂಬ ಬರಹದಲ್ಲಿ ಬಸ್ಸಿನ ಹೆಸರುಗಳ ಬಗ್ಗೆ ಪ್ರಸ್ತಾಪವಿದೆ.
  • ಈಗಿನಂತೆ ಆಗಲೂ ಫೋನು, ಮೊಬೈಲು, ಫೇಸ್ಬುಕ್ಕು ಎಲ್ಲ ಇದ್ದಿದ್ದರೆ ನಾಗರಾಜಣ್ಣನಂತ ಎಷ್ಟೋ ಜನರು ಇಂದೂ ಸಂಪರ್ಕದಲ್ಲಿರುತ್ತಿದ್ದರೇನೋ ಎಂದು ಆಗಾಗ ಅನ್ನಿಸುವುದುಂಟು.

21 comments:

kanaadaraaghava said...

aahaa! sundara sulalitha subhaavanaa salilachaitra prbandha geleya.

Sandeepa Nadahalli said...

@ಕಣಾದ,
ತುಂಬಾ ಧನ್ಯವಾದಗಳು.

ಮಧು said...

ಸಂದೀಪ,
ಖುಶಿ ಆತು ಓದಿ. ಆವಾಗ ನಮಗೆಲ್ಲ ಒಬ್ಬೊಬ್ವ ಫೇವರೇಟ್ ಡ್ರೈವರ್ರು, ಕಂಡಕ್ಟರ್ರು ಇದ್ದಿದ್ದು ಸುಳ್ಳಲ್ಲ. ಈಗ ನೆನೆದರೆ ಒಂಥರಾ ಖುಶಿ.
ಚೊಲೋ ಇದ್ದು.

Deepthi said...

Well written, SN.

I like the detailing..i can imagine being there, experiencing it..

Reading this post made me reminisce similar experiences of my child-hood.

ಚಿತ್ರಾ said...

ಸಂದೀಪ,
ಹಳೆಯ ನೆನಪುಗಳನ್ನು ಕಣ್ಣಿಗೆ ಕಟ್ಟುವಂತೆ ಬಿಡಿಸಿದ್ದೀಯ ! ನೀ ಹೇಳಿದ ಬಹಳಷ್ಟು ಬಸ್ಸುಗಳು ನಮ್ಮೂರ ಮೇಲೂ ಹಾದು ಹೋಗುತ್ತಿದ್ದವು.
ಮನಸ್ಸು ಮತ್ತೆ ಅಲ್ಲೇ ಓಡಿತು . ಎಲ್ಲಾ ನೆನಪಿಸಿಕೊಂಡು ಸಂಭ್ರಮದ ನಡುವೆಯೇ ಒಂದು ನೋವಿನ ಎಳೆ ! ಅವತ್ತು ಸುಶ್ರುತ ನ ಪುಷ್ಪಕ ವಿಮಾನ ಓದಿದಾಗಲೂ ಹೀಗೇ ಆಗಿತ್ತು . ಚಂದ ಬರದ್ದೆ !

pramodc said...

ಸೂಪರ್.. ಬಹಳ ಒಳ್ಳೆಯ ನೆನಪು ಮಾಡಿಸಿಕೊಟ್ರಿ..ಮು೦ಚೆ ಎಲ್ಲಾ ಬಸ್ಸ್ ನಮ್ಮದೇ ಎ೦ಬಾ ಫೀಲಿ೦ಗ್ ಜೋರಿತ್ತು..:)

Suma said...

ಹ ಹ ಚೆನ್ನಾಗಿ ಬರದ್ದೆ ಸಂದೀಪ .......

ಅದರ ಮಧ್ಯೆ ..ಸಂತೆ ದಿನ ಏಜಂಟರು ಅಶೋಕಣ್ಣ...ಗೊಗ್ಗರ ಧ್ವನಿಲ್ಲಿ ...ಎಹ್ ..."ನಡಹಳ್ಳಿ ಹುಡ್ರು ಹತ್ತ ಬ್ಯಾಡ್ರಿ" ...ಅಂತ ಕೂಗೋದು ....

ನೆನಪಾದ್ರೆ ನಗು ಬರ್ತು

sunaath said...

ಸಂದೀಪ,
ನಾಗರಾಜಣ್ಣ ಎಂಥಾ great ಮನುಷ್ಯ ಅಲ್ವಾ? ಅವರಿಗೆ ನನ್ನ ನೂರು ನಮಸ್ಕಾರಗಳು. ಅವರ ಬಗೆಗೆ ಬರೆದ ನಿಮಗೆ ಧನ್ಯವಾದಗಳು.

Harisha - ಹರೀಶ said...

ಸಂದೀಪ, ಮಸ್ತ್ ಮಸ್ತ್ ಮಸ್ತ್!!!
ರಾಶಿ ದಿನ ಆದ್ಮೇಲೆ ಈ ರೀತಿ ಅನುಭವ ಕಥನ ಓದಿದಿ... ನಾನೇ ಅಲ್ಲಿದ್ನೇನ ಅನ್ಸುವಂಗೆ ಬರದ್ದೆ ನೋಡು :-)
Expecting more posts of this kind..

ವಿ.ರಾ.ಹೆ. said...

"ನಾನು ಆ ಸಂದಿಯಲ್ಲಿ ನಿಂತುಕೊಂಡು, ನಡುಗುವ ಕೈಗಳಿಂದ ಮೊದಲನೇ ಬಾರಿ ಹಾರ್ನ್ ಮಾಡಿದ್ದು ಇನ್ನೂ ಚೆನ್ನಾಗಿ ನೆನಪಿದೆ. ಆದರೆ ಆಗ ಮೈ ನಡುಗಿದ್ದು ಹಾರ್ನಿನ ಸೌಂಡಿಗೋ ಅಥವಾ ಗಾಬರಿ ಮಿಶ್ರಿತ ಖುಷಿಗೋ ಗೊತ್ತಿಲ್ಲ!"


Nice :)

ದಿನಕರ ಮೊಗೇರ said...

tumbaa sogasaada nirUpaNe...

haLeya nenapu tantu...

ಕೃಷ್ಣ ಭಟ್ಟ said...

we used to VISIT college by bus. experienced all d similar incidents and in addition v used to bunk classes to avoid specific drivers:-)

ಶಾಂತಲಾ ಭಂಡಿ said...

ಸಂದೀಪ,
ತುಂಬ ದಿನಗಳ ಮೇಲೆ ತುಂಬ ಚಂದ ಬರದ್ದೆ. ರಾಶೀ ಇಷ್ಟ ಆತು.

ಪ್ರೀತಿಯಿಂದ,
-ಶಾಂತಲಾ ಭಂಡಿ

Sandeepa Nadahalli said...

@ಮಧು,
ತುಂಬಾ ಧನ್ಯವಾದ. ಹೌದು. ಬಸ್ಸು, ಡ್ರೈವರ್ರು ಅಂದ್ರೆಲ್ಲಾ ಏನೋ ಕ್ರೇಝು :)

@Deepthi,
Thanks DP. Waiting to read your experiences! :)

@ಚಿತ್ರಾ,
ಕಣ್ಣಿಗೆ ಕಟ್ಟಿದಂತೆ ಉಳಿದುಕೊಂಡಿದ್ದರಿಂದಲೇ ಹಾಗೆ ಬರೆಯುವುದು ಸಾದ್ಯವಾಯಿತು.

ನಿಮ್ಮೂರ ಮೇಲೆ? ಇಷ್ಟು ಹೇಳಿದ ಮೇಲೆ ಕೇಳಲೇಬೇಕು. ನಿಮ್ಮ ಊರು ಯಾವುದು?

ಧನ್ಯವಾದ :)

Sandeepa Nadahalli said...

@pramodc,
:) ಹೌದು.. ಬಾಗ್ಲಲ್ ನಿತ್ಕೊಂಡ್ ರೈಟ್ ಹೇಳೋದು, ಬೆಲ್ ಒತ್ತೋದು ಎಲ್ಲಾ ಇತ್ತು :)

@Sumakka,
ಥ್ಯಾಂಕು ಥ್ಯಾಂಕು:) :)

ಹ ಹ.. ಅಶೋಕಣ್ಣನ ಬಗ್ಗೆ ಒಂದು ಕಾದಂಬರಿನೆ ಬರಿಲಕ್ಕೇನ! :)

@sunaath,
ಧನ್ಯವಾದಗಳು :)

@Harisha,
ಥ್ಯಾಂಕ್ಸ್ ಥ್ಯಾಂಕ್ಸ್ ಥ್ಯಾಂಕ್ಸ್! :)
ಸಂತೋಷ. ಬರೆಯೋಣ..

@ವಿ.ರಾ.ಹೆ,
ಜಾಸ್ತಿ ನೆನ್ಪ್ ಮಾಡಡ.. ಮತ್ ಕೈ ನಡುಗ್ತು!! :-)

Sandeepa Nadahalli said...

@ದಿನಕರ ಮೊಗೇರ,
ಧನ್ಯವಾದಗಳು :)

@ಕೃಷ್ಣ,
I like the VISIT part :-) Interesting to know about avoiding drivers :)

@ಶಾಂತಲಾ,
ಥ್ಯಾಂಕ್ಸ್ :)
ಅಪ್ರೂಪಕ್ ಚಂದ ಬರದ್ದಿ ಅಂತನಾ!?;)

ಅಷ್ಟೇ ಪ್ರೀತಿಯಿಂದ
ಸಂದೀಪ :)

ಗಿರೀಶ್.ಎಸ್ said...

ಮಸ್ತ್ ರಿ:
ನಾನು ಕೂಡ ಹಾಯ್ ಸ್ಚೂಲಿನಲ್ಲಿ ಹಳೇಬೀಡಿನಿಂದ ಬೇಲೂರಿಗೆ ಬಸ್ಸಿನಲ್ಲಿ ಹೋಗುತ್ತಿದ್ದೆವು..ಇದೆ ತರಹ ನಮಗೆ ಒಬ್ಬ ಡ್ರೈವರ್ ಇದ್ದರು,ಅವರ ಹೆಸರು ಗೊತ್ತಿಲ್ಲ,ಆದರೆ ನಾವೆಲ್ಲಾ ತಾತ ಅಂತ ಕರೆಯುತ್ತಿದ್ದೆವು..ಬೇಲೂರಿನಲ್ಲಿ ಸೋಮವಾರ ಸಂತೆ,ಆಗ ಕುಡಿದು ಬಸ್ ಹತ್ತುವ್ವವರು ಸ್ವಲ್ಪ ಜಾಸ್ತಿ,ಆಗ ನಮಗೆ ಈ ತಾತ ಡ್ರೈವರ್ ಹತ್ತುವ ಜಾಗದಲ್ಲಿ ಬಿಟ್ಟು ಕೊಡುತ್ತಿದ್ದರು..ಇನ್ನೊಬ್ಬ ಡ್ರೈವರ್ ಇದ್ದ ಮುಕುಂದ ಅಂತ,ಬೆಳಗ್ಗೆ ಹೋಗುವ ಬಸ್ಸಿಗೆ ಈ ಮುಕುಂದ ಡ್ರೈವರ್...ಸಂಜೆ ಬಸ್ಸಿಗೆ ತಾತ ಡ್ರೈವರ್...ನಮಗೂ ಮುಕುಂದನಿಗು ಬೇಜಾನ್ ಸಲ ಜಗಳ ಆಗಿದೆ..ನಮ್ಮ ಹತ್ತಿರ ಪಾಸು ಇದ್ದದ್ದರಿಂದ ಬಿಟ್ಟಿ ಹೊಡಾದುವವರು ಅಂತ ಬೈಯುತ್ತಿದ್ದ..ಕೆಲವೊಮ್ಮೆ ನಮ್ಮನ್ನು ಕಂಡರೆ ಬಸ್ಸನ್ನು ನಿಲ್ಲಿಸುತ್ತಲೇ ಇರಲಿಲ್ಲ ... ಆಗ ಅದೇ ಬಸ್ಸಿನಲ್ಲಿ ಬರುತ್ತಿದ್ದ ಕೆಲವು ಶಿಕ್ಷಕರು ಮಕ್ಕಳ ಮೇಲೆ ಇನ್ನೊಂದ್ ಸಲ ಏನಾದ್ರೂ ಮಾತಾಡಿದ್ರೆ ಸರಿ ಇರಲ್ಲ ಅಂತ ಅವರಿಗೆ ಹೇಳಿ ನಮಗೆ ಸಪೋರ್ಟ್ ಮಾಡುತ್ತಿದ್ದರು...

Sandeepa Nadahalli said...

@ಗಿರೀಶ್.ಎಸ್
ಎಸ್ ರಿ:)
ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ಹೀಗೆ, ಕೆಲ ಓದುಗರ ನೆನಪನ್ನು ಕೆದಕಿ, ಮನವನ್ನು ಮುಟ್ಟುವಂತಾದರೆ ಬರವಣಿಗೆ ಸಾರ್ಥಕ.

Sandeepa Nadahalli said...

There were some comments for this post on facebook. Posting those here along with my reply!

Anuradha B Rao: ಎಂಥ ..ವಿವರಣೆ ...ನನ್ನ ಬಾಲ್ಯ ಹಳ್ಳಿಯಲ್ಲಿ ಕಳೆದಿಲ್ಲ ..ನಡಹಳ್ಳಿ ಹುಡುಗನನ್ನು ಮದುವೆಯಾದ ಕಾರಣ ಮೊದಲಿಗೆ ಅನಿವಾರ್ಯವಾಗಿ ಊರಿಗೆ ಹೋಗುವ ಸಂಧರ್ಭ ಬರುತ್ತಿತ್ತು ..ದಿನ ಕಳೆದಂತೆ ಊರಿನ ಭೇಟಿ ಆಪ್ಯಾಯಮಾನ .ನದಹಳ್ಳಿಗೆ ಬಸ್ಸಿನಲ್ಲಿ ಓಡಾಡಿದ ನೆನಪು ಹಸಿರಾಗಿದೆ .ಮಂಗಳವಾರ ಸೊರಬದ ಸಂತೆಯ ದಿನ ನೂಕು ನುಗ್ಗಲಿನ ನಡುವೆ ಡ್ರೈವರ್ ನಮ್ಮನ್ನು ಮುಂಬಾಗಿಲಿನಿಂದ ಇಳಿಸಿದ್ದಿದೆ ..ಡ್ರೈವರನ ಗೊಣಗಾಟ ಆಗ ಸಿಟ್ಟು ತರಿಸಿದರೂ ..ಈಗ ಸವಿ ನೆನಪು ...ಸಂದೀಪ ..ನಿನಗೆ ನಮ್ಮ ಅಭಿನಂದನೆಗಳು .ತುಂಬಾ ಚೆನ್ನಾಗಿದೆ .

Sandeepa Nadahalli:
ಧನ್ಯವಾದಗಳು ದೊಡ್ಡಮ್ಮ! :-)

Karthik Nadahalli ‎@ sandeepa, nange innu sariyagi nenapiddu , neenu ninna Dilpoma time alli ondu natakadalli bussina bagge hasya madiddu " LAXMI GE JOT BIDDU BANDIDINI" , innu namma oorinavara dinachariyalli kanishta vendaru onu yeradu sala ee bassugala bagge maathu bande battu...let me recall some famous buses..Bondhi Gajanan, Haveri bussu, Ukkadagatri, Shantha Bassu ( Shimoga), Malagi paala..honnali express..akki alloru..

Sandeepa Nadahalli:
ಕಾರ್ತಿಕ್: ಅಯ್ಯಪ್ಪ.. ದೇವ್ರೆ!.. ಯಾರಿಗೂ ನೆನ್ಪ್ ಇರದಿಲ್ಲೆ ಅದೆಲ್ಲ ಅಂದ್ಕಂಡಿದ್ದಿ ಮಾರಾಯ:) ಹೆ ಹೆ..
ಲಕ್ಷ್ಮಿಗೆ ಜೋತ್ ಬಿದ್ದಿದ್ದು!;-) ಅಂದಹಾಗೆ, ಸಕ್ಕತ್ ಬಸ್ ಲಿಸ್ಟ್ ಹಾಕಿ ನೆನ್ಪ್ ಮಾಡಿದ್ದಕ್ಕೆ ಥ್ಯಾಂಕ್ಸು! :)

Anonymous said...

sandeepa irava bagge swarasya eanadru idre bareya,

Hotlu Subbanna, Shekarappana Bonda,amrapali hotlu, bus stand hotlu masale dose, benne dose subbanna, paawali shankara, agent ashoka,

Sandeepa Nadahalli said...

@anonymous:

Sure.. bareyoNa! :)